ರಾಜ್ಯಸಭೆ ಉಪಸಭಾಪತಿ ಹುದ್ದೆ: ಮಮತಾ ನಾಯಕತ್ವಕ್ಕೆ ಕಾಂಗ್ರೆಸ್ ಸಮ್ಮತಿ
ಮೈತ್ರಿಯ ಸ್ಥಾಪನೆಗೆ ಪೂರಕ ಹೆಜ್ಜೆ

ಹೊಸದಿಲ್ಲಿ, ಜೂ.27: ರಾಜ್ಯಸಭೆ ಉಪಸಭಾಪತಿ ಹುದ್ದೆಗೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಕಷ್ಟು ಸದಸ್ಯಬಲವನ್ನು ಹೊಂದಿದ್ದರೂ, ಈ ವಿಷಯದಲ್ಲಿ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿಯವರ ನಿಲುವನ್ನು ಬೆಂಬಲಿಸುವುದಾಗಿ ಕಾಂಗ್ರೆಸ್ ತಿಳಿಸಿದ್ದು, ಈ ಮೂಲಕ 2019ರ ಲೋಕಸಭಾ ಚುನಾವಣೆಗೆ ಮೈತ್ರಿರಂಗ ಸ್ಥಾಪನೆಗೆ ಪೂರಕವಾದ ಹೆಜ್ಜೆಯನ್ನಿರಿಸಿದೆ.
1969 ಮತ್ತು 1977ರ ನಡುವಿನ ಎಂಟು ವರ್ಷಾವಧಿ ಹೊರತುಪಡಿಸಿ ಈ ಹುದ್ದೆಗೆ ಕಾಂಗ್ರೆಸ್ ಅಭ್ಯರ್ಥಿಗಳೇ ಆಯ್ಕೆಯಾಗಿದ್ದಾರೆ. ಆದರೆ ಇದೀಗ ಟಿಎಂಸಿ ಸದಸ್ಯ ಸುಖೇಂದು ಶೇಖರ್ ರಾಯ್ ಅವರಿಗೆ ವಿಪಕ್ಷಗಳು ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಮತ್ತು ಬಿಜೆಪಿ ವಿರುದ್ಧ ವಿಪಕ್ಷಗಳ ಒಗ್ಗಟ್ಟಿನ ಪ್ರದರ್ಶನಕ್ಕೆ ಈ ಅವಕಾಶವನ್ನು ಬಳಸಿಕೊಳ್ಳುವ ಉದ್ದೇಶದಿಂದ ಕಾಂಗ್ರೆಸ್ ಕೂಡಾ ರಾಯ್ ಅಭ್ಯರ್ಥಿತನಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದೆ. 2012ರಿಂದ ಕಾಂಗ್ರೆಸ್‌ನ ಪಿ.ಜೆ.ಕುರಿಯನ್ ಉಪಸಭಾಪತಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ರಾಯ್ ಹೆಸರನ್ನು ಟಿಎಂಸಿ ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ.
ವಿಪಕ್ಷಗಳ ಒಮ್ಮತದ ಅಭ್ಯರ್ಥಿಯ ಕುರಿತು ಯಾವುದೇ ನಿರ್ಧಾರಕ್ಕೆ ಬರಲಾಗಿಲ್ಲ. ನಾವು ಯಾರ ಹೆಸರನ್ನೂ ಮುಂದಿರಿಸಿಲ್ಲ. ವಿಪಕ್ಷಗಳು ಸಂಯುಕ್ತವಾಗಿ ಒಂದು ಹೆಸರನ್ನು ಘೋಷಿಸಲಿವೆ ಎಂದು ಟಿಎಂಸಿ ಮುಖಂಡ ಡೆರೆಕ್ ಒ’ಬ್ರಿಯಾನ್ ತಿಳಿಸಿದ್ದಾರೆ. 245 ಸದಸ್ಯಬಲದ ರಾಜ್ಯಸಭೆಯಲ್ಲಿ 51 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಉಪಸಭಾಪತಿ ಹುದ್ದೆಗೆ ಸಹಜವಾಗಿ ಹಕ್ಕು ಸಾಧಿಸಬಹುದು. ಆದರೆ ಬಿಜೆಪಿಯೇತರ ಅಭ್ಯರ್ಥಿ ಗೆಲ್ಲಬೇಕಿದ್ದರೆ ಬಿಜೆಡಿ, ಟಿಆರ್‌ಎಸ್ ಪಕ್ಷಗಳ ಬೆಂಬಲ ಅಗತ್ಯವಾಗಿದೆ. ಈ ಎರಡೂ ಪಕ್ಷಗಳು ಈಗಾಗಲೇ ಟಿಎಂಸಿ ಅಭ್ಯರ್ಥಿ ಕಣಕ್ಕಿಳಿಯುವುದನ್ನು ಬೆಂಬಲಿಸಿವೆ. ರಾಜ್ಯಸಭಾ ಉಪಸಭಾಪತಿ ಹುದ್ದೆಗೆ ಈ ಹಿಂದೆ 1992ರಲ್ಲಿ ಚುನಾವಣೆ ನಡೆದಿತ್ತು. ಕಾಂಗ್ರೆಸ್‌ನ ನಜ್ಮಾ ಹೆಫ್ತುಲ್ಲಾ (ಈಗ ಬಿಜೆಪಿಯಲ್ಲಿದ್ದಾರೆ) ಮತ್ತು ವಿಪಕ್ಷಗಳ ಅಭ್ಯರ್ಥಿ ರೇಣುಕಾ ಚೌಧರಿ ನಡುವೆ ನಡೆದ ಸ್ಪರ್ಧೆಯಲ್ಲಿ ನಜ್ಮಾ 128 ಮತ, ರೇಣುಕಾ 95 ಮತ ಗಳಿಸಿದ್ದರು. 26 ವರ್ಷಗಳ ಬಳಿಕ ಇದೀಗ ಮತ್ತೆ ಸ್ಪರ್ಧೆ ನಡೆಯುವುದು ಬಹುತೇಕ ನಿಶ್ಚಿತವಾಗಿದ್ದು ಆಡಳಿತ ಮೈತ್ರಿಕೂಟದ ಸಂಖ್ಯಾಬಲ ಕಡಿಮೆಯಿದ್ದರೂ , ವಿಪಕ್ಷಗಳ ಸಂಯುಕ್ತ ಅಭ್ಯರ್ಥಿಗೆ ಹುದ್ದೆ ಬಿಟ್ಟುಕೊಡಲು ಬಿಜೆಪಿ ಬಯಸುತ್ತಿಲ್ಲ.
ಜುಲೈ 18ರಿಂದ ಆರಂಭವಾಗುವ ಸಂಸತ್ತಿನ ಮುಂಗಾರು ಅಧಿವೇಶನದ ಸಂದರ್ಭ ನಾಮಪತ್ರ ಸಲ್ಲಿಕೆ ಹಾಗೂ ಚುನಾವಣಾ ಪ್ರಕ್ರಿಯೆ ನಡೆಯಲಿದೆ.







