ಕೊಳ್ನಾಡು: ಗುಡ್ಡ ಕುಸಿದು ಮನೆಗೆ ಹಾನಿ; ನಾಲ್ವರು ಪಾರು

ಬಂಟ್ವಾಳ, ಜೂ. 27: ಕೊಳ್ನಾಡು ಗ್ರಾಮದ ಮಂಕುಡೆ ಎಂಬಲ್ಲಿ ಗುಡ್ಡಯೊಂದು ಕುಸಿದು ಮನೆಗೆ ಹಾನಿಯಾಗಿದ್ದು, ನಾಲ್ವರು ಅಪಾಯದಿಂದ ಪಾರಾಗಿದ್ದಾರೆ.
ಕೊಳ್ನಾಡು ಗ್ರಾಮದ ಮಂಕುಡೆ ನೆಡ್ಯಾಲ ನಿವಾಸಿ ಮುಂಡಪ್ಪ ಪೂಜಾರಿ ಎಂಬವರ ಮನೆಯ ಹಿಂಬದಿಯ ಸುಮಾರು 40ಅಡಿ ಎತ್ತರದ ಗುಡ್ಡ ಕುಸಿದು ಬಿದ್ದ ಪರಿಣಾಮ
ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು, ಮನೆಯ ಬಾಗಿಲು, ಕಿಟಕಿ ಹಾನಿಗೊಂಡಿದೆ. ಸಮಯ ಪ್ರಜ್ಞೆಯಿಂದ ಮನೆಯೊಳಗಡೆ ಇದ್ದ ನಾಲ್ವರು ಹೊರಗಡೆ ಬಂದಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಗುಡ್ಡ ಕುಸಿತದಿಂದ ಹಲವು ದಶಕಗಳಿಂದ ಸಾವಿರಾರು ಜನರಿಗೆ ಉಪಯೋಗವಾಗಿದ್ದ ಮಂಕುಡೆ-ಕೊಡಂಗೆ-ಕುಳಾಲು ಸಂಪರ್ಕ ದಾರಿ ಸಂಪೂರ್ಣ ನೆಲಕಚ್ಚಿದೆ. ಇದರಿಂದ ನೂರಾರು ಮಂದಿ ತೊಂದರೆ ಅನುಭವಿಸುವಂತಾಗಿದೆ. ಘಟನಾ ಸ್ಥಳಕ್ಕೆ ಕೊಳ್ನಾಡು ಗ್ರಾಪಂ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಸದಸ್ಯ ಪವಿತ್ರ ಪೂಂಜ, ಹರೀಶ್ ಮಂಕುಡೆ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ತೆರವು ಕಾರ್ಯಾಚರಣೆ ಮುಂದುವರಿಸಿದ್ದಾರೆ.
ವಿಟ್ಲ ಕಸಬಾ ಗ್ರಾಮದ ಸೇರಾಜೆ ಲೂಯಿಸ್ ಡಯಾಸ್ ಎಂಬವರ ದನದ ಕೊಟ್ಟಿಗೆ ಮೇಲೆ ಪಕ್ಕದ ಮನೆ ನಿವಾಸಿ ಎಲಿಜಬೆತ್ ಎಂಬವರ ಹಳೆಯ ಮನೆ ಕುಸಿದು ಬಿದ್ದು, ಹಾನಿ ಉಂಟಾಗಿದೆ.





