ದೇವಸ್ಥಾನದ ಧ್ವನಿವರ್ಧಕದಲ್ಲಿ ಕರೆ ನೀಡಿದ್ದೇ ಗುಂಪು ದೊಡ್ಡದಾಗಲು ಕಾರಣ: ಸಂತ್ರಸ್ತನ ಸಹೋದರನ ಆರೋಪ
ಗೋಹತ್ಯೆ ಶಂಕೆಯಲ್ಲಿ ವ್ಯಕ್ತಿಯ ಥಳಿಸಿ ಹತ್ಯೆಗೈದ ಪ್ರಕರಣ

ಹಾಪುರ್ (ಉ.ಪ್ರ), ಜೂ.27: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಬಜೇರ ಕುರ್ದ್ ಗ್ರಾಮದಲ್ಲಿ ಗೋಹತ್ಯೆ ಶಂಕೆಯಲ್ಲಿ ವ್ಯಕ್ತಿಯನ್ನು ಥಳಿಸಿ ಕೊಂದ ಪ್ರಕರಣದಲ್ಲಿ ಗಂಭೀರ ಗಾಯಗೊಂಡು ಸದ್ಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ 65ರ ಹರೆಯದ ಸಮೀಯುದ್ದೀನ್ ಅವರ ಸಹೋದರ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ದೇವಸ್ಥಾನದ ಧ್ವನಿವರ್ಧಕದ ಮೂಲಕ ಜನರು ಸೇರುವಂತೆ ಕರೆ ನೀಡಿದ ಹಿನ್ನೆಲೆಯಲ್ಲಿ ಗುಂಪಿನಲ್ಲಿದ್ದ ಜನರ ಸಂಖ್ಯೆ ಹೆಚ್ಚಾಯಿತು" ಎಂದು ತಿಳಿಸಿದ್ದಾರೆ ಎಂದು catchnews.com ವರದಿ ಮಾಡಿದೆ.
ಜೂನ್ 18ರಂದು ನಡೆದ ಈ ಘಟನೆಯ ಬಗ್ಗೆ ಆರಂಭದಲ್ಲಿ ಯಾಸೀನ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಅದೊಂದು ರಸ್ತೆ ಅಪಘಾತದ ಹಿನ್ನೆಲೆಯಲ್ಲಿ ನಡೆದ ಘಟನೆ ಎಂದು ತಿಳಿಸಿದ್ದರು. ಆದರೆ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ಇದು ಗೋರಕ್ಷಣೆಯ ಹೆಸರಲ್ಲಿ ನಡೆದ ಕೃತ್ಯ ಎಂಬುವುದು ದೃಢಪಟ್ಟಿತ್ತು. ಘಟನೆಯಲ್ಲಿ ಮೃತಪಟ್ಟ ಕಾಸಿಮ್ ಗೋಹತ್ಯೆ ನಡೆಸುತ್ತಿದ್ದಾರೆ ಎಂಬ ಶಂಕೆಯಲ್ಲಿ ಜೂನ್ 18ರಂದು ಗುಂಪೊಂದು ಅವರ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಸಮೀಯುದ್ದಿನ್ ಮಧ್ಯಪ್ರವೇಶಿಸಿ ಕಾಸಿಮ್‌ಗೆ ಹೊಡೆಯದಂತೆ ಹಲ್ಲೆಕೋರರಲ್ಲಿ ವಿನಂತಿಸಿದ್ದರು. ಆದರೆ ಅದಕ್ಕೆ ಯಾವ ಬೆಲೆಯನ್ನೂ ನೀಡದ ಹಲ್ಲೆಕೋರರು ಸಮೀಯುದ್ದಿನ್ ಅವರಿಗೂ ಹಲ್ಲೆಗೈದಿದ್ದರು.
ಘಟನೆಯಲ್ಲಿ ಕಾಸಿಮ್ ಸಾವನ್ನಪ್ಪಿದರೆ ಸಮೀಯುದ್ದಿನ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಈ ಬಗ್ಗೆ ಜನರ ಚಳವಳಿಯ ರಾಷ್ಟ್ರೀಯ ಮೈತ್ರಿ ಸಂಘಟನೆಗೆ ಮಾಹಿತಿ ನೀಡಿದ ಯಾಸೀನ್, "ನನ್ನ ಸಹೋದರ ಆ ದಿನ ಹುಲ್ಲು ತರಲೆಂದು ತೆರಳಿದ್ದರು" ಎಂದು ತಿಳಿಸಿದ್ದಾರೆ. "ಘರ್ಷಣೆಯೊಂದರಲ್ಲಿ ನನ್ನ ಸಹೋದರ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಸುದ್ದಿ ನನಗೆ ಸಿಕ್ಕಿತು. ನನಗೆ ನಂತರ ಸಿಕ್ಕ ಮಾಹಿತಿಯ ಪ್ರಕಾರ ಆರಂಭದಲ್ಲಿ 10-12 ಜನರು ಇದ್ದ ಗುಂಪು, ಸ್ಥಳೀಯ ದೇವಸ್ಥಾನದ ಧ್ವನಿವರ್ಧಕದ ಮೂಲಕ ಜನ ಸೇರುವಂತೆ ಕರೆ ನೀಡಲಾದ ನಂತರ ದೊಡ್ಡದಾಗುತ್ತಾ ಸಾಗಿತ್ತು ಎಂದು ಯಾಸಿನ್ ಆರೋಪಿಸಿದ್ದಾರೆ ಎಂದು catchnews.com ವರದಿ ಮಾಡಿದೆ







