ಪ್ರತಿ ಜಿಲ್ಲೆಯಲ್ಲಿ ಚಿತ್ರಸಮಾಜ ನಿರ್ಮಾಣದ ಗುರಿ: ನಾಗತಿಹಳ್ಳಿ ಚಂದ್ರಶೇಖರ್
ಬೆಂಗಳೂರು, ಜೂ.28: ಪ್ರತಿ ಜಿಲ್ಲೆ ಸೇರಿದಂತೆ ನಾಲ್ಕು ವಲಯದಲ್ಲಿ ಸಿನಿಮಾ ಉತ್ಸವಗಳನ್ನು ಹಮ್ಮಿಕೊಳ್ಳುವ ಮೂಲಕ ಎಲ್ಲ ಬಗೆಯ ಸಿನಿಮಾಗಳ ಪ್ರೀತಿಯನ್ನು ಕೊಂಡೊಯ್ಯುತ್ತೇನೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಇಂದಿಲ್ಲಿ ತಿಳಿಸಿದರು.
ಗುರುವಾರ ನಗರದ ವಾರ್ತಾಸೌಧದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸದಭಿರುಚಿಯ ಸಿನಿಮಾಗಳು ಬೆಂಗಳೂರು, ಮೈಸೂರಿ ನಂತಹ ನಗರಗಳಲ್ಲಿ ಮಾತ್ರ ಬಿಡುಗಡೆಯಾದರೆ ಸಾಲದು, ಪ್ರತಿ ಹಳ್ಳಿಗೂ ತಲುಪಬೇಕು. ಅದಕ್ಕಾಗಿಯೇ ಜಿಲ್ಲಾ ವ್ಯಾಪ್ತಿಯಲ್ಲಿ ಚಿತ್ರ ಸಮಾಜ ನಿರ್ಮಿಸುವ ಗುರಿ ಹೊಂದಿದ್ದೇನೆ ಎಂದು ಮಾಹಿತಿ ನೀಡಿದರು.
ರಾಜ್ಯದ ನಾಲ್ಕು ವಿಭಾಗದಲ್ಲಿ ಕೆಲವು ಕ್ರಿಯಾಶೀಲ ಚಿತ್ರ ಸಮಾಜಗಳಿವೆ, ಕೆಲವು ಪುಟ್ಟ ಪುಟ್ಟ ಊರುಗಳಲ್ಲಿ ವೈಯಕ್ತಿಕ ನೆಲೆಯಲ್ಲಿ ಸದಭಿರುಚಿಯ ಸಿನಿಮಾ ಕೃಷಿ ಮಾಡುತ್ತಿರುವ ಮತ್ತು ನೋಡುತ್ತಿರುವ ವ್ಯಕ್ತಿಗಳಿದ್ದಾರೆ. ಇವರೆಲ್ಲರನ್ನೂ ಒಟ್ಟುಗೂಡಿಸಿ ಪ್ರತಿ ಜಿಲ್ಲೆಯಲ್ಲಿಯೂ ಒಂದು ಕ್ರಿಯಾಶೀಲ ಚಿತ್ರ ಸಮಾಜವನ್ನು ಹುಟ್ಟುಹಾಕುವ ಮೂಲಕ ಸದಭಿರುಚಿಯ ಪ್ರೇಕ್ಷಕರನ್ನು ಒಟ್ಟು ಮಾಡಿ ದೊಡ್ಡ ಆಂದೋಲನ ಮಾಡಬೇಕು ಎಂದು ನುಡಿದರು.
ಕೇರಳ, ಬಂಗಾಳದಲ್ಲಿ ಇಂತಹ ಆಂದೋಲನ ಕ್ರಾಂತಿ ನಡೆದಿದೆ. ವಿಶ್ವದಲ್ಲಿ ಎಲ್ಲೆಲ್ಲಿ ಫಿಲ್ಮ್ ಸೊಸೈಟಿ ಸದಾ ಚಾಲ್ತಿಯಲ್ಲಿವೆ, ಅದನ್ನು ಇಲ್ಲಿ ಅನುಷ್ಠಾನಗೊಳಿಸಲು ಚಿಂತನೆ ನಡೆಸಿದ್ದೇನೆ ಎಂದ ಅವರು, ಪದವಿಗಳಲ್ಲಿ ಸಿನಿಮಾ ಕುರಿತು ಚರ್ಚೆ ಆಗಲು ಶೈಕ್ಷಣಿಕ ಸ್ವರೂಪ ತಂದುಕೊಡಬೇಕು. ಇದಕ್ಕೆ ಅಧ್ಯಯನ ಗ್ರಂಥಗಳ ಕೊರತೆ ಇದೆ, ಇಂಗ್ಲಿಷ್‌ನಲ್ಲಿ ಸಾಕಷ್ಟು ಗ್ರಂಥಗಳಿವೆ ಎಂದು ನಾಗತಿಹಳ್ಳಿ ಹೇಳಿದರು.
ಸಾಮಾಜಿಕ ಜಾಲತಾಣ, ಯೂಟ್ಯೂಬ್ ಕೂಡ ದೊಡ್ಡ ವೇದಿಕೆಯಾಗಿದೆ ಎಂದ ಅವರು, ಅಕಾಡೆಮಿಗೆ ಒಳ್ಳೆಯ ಕಟ್ಟಡ ನಿರ್ಮಿಸಿದ್ದಾರೆ. ಅಲ್ಲಿ ಚಿತ್ರಮಂದಿರ ಅಪೂರ್ಣವಾಗಿದೆ, ಅದನ್ನು ಬೇಗ ಪೂರ್ಣಗೊಳಿಸಬೇಕು, ಸರ್ವಶ್ರೇಷ್ಠ ಚಿತ್ರಗಳನ್ನು ಡಿಜಿಟಲ್ನಲ್ಲಿಡಬೇಕು. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಿರ್ದಿಷ್ಟ ದಿನದಂದೇ ನಡೆಯುವ ವ್ಯವಸ್ಥೆ ಮಾಡುತ್ತೇನೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ, ರಿಜಿಸ್ಟ್ರಾರ್ ದಿನೇಶ್ ಸೇರಿ ಪ್ರಮುಖರಿದ್ದರು.
ಸಿಕ್ಕ ಅಧಿಕಾರದಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಣೆ ಮಾಡುತ್ತೇನೆ. ತಿಂಗಳಿಗೊಂದು ಕಾರ್ಯಕ್ರಮ ಬೆಂಗಳೂರು, ಮತ್ತೊಂದು ಬೆಂಗಳೂರಿನ ಹೊರಗೆ ಆಯೋಜಿಸುವ ಚಿಂತನೆ ಹಾಕಿಕೊಂಡಿದ್ದೇನೆ. ನಮಗೆ ಇರುವ ಹಣದ ಚೌಕಟ್ಟಿನಲ್ಲೇ ಕಾರ್ಯಕ್ರಮ ಆಯೋಜಿಸಿತ್ತೇವೆ. ಇನ್ನಷ್ಟು ಹಣ ಬೇಕು ಎಂದರೆ ಸರಕಾರದ ಗಮನಕ್ಕೆ ತಂದು ಮುಂದುವರೆಯುತ್ತೇವೆ.
-ನಾಗತಿಹಳ್ಳಿ ಚಂದ್ರಶೇಖರ್, ಅಧ್ಯಕ್ಷ, ಕರ್ನಾಟಕ ಚಲನಚಿತ್ರ ಅಕಾಡೆಮಿ