ಸರಕಾರಿ ಶಾಲಾ ಮಕ್ಕಳಿಗೆ ಉಚಿತ ಅರಣ್ಯ ಸಫಾರಿ: ಸಚಿವ ಆರ್.ಶಂಕರ್
ಬೆಂಗಳೂರು, ಜೂ.28: ಸರಕಾರಿ ಶಾಲಾ-ಕಾಲೇಜು ಮಕ್ಕಳನ್ನು ಉಚಿತವಾಗಿ ಸಫಾರಿ ಕರೆದೊಯ್ಯುವುದು, ಕಾಡು ಹಾಗೂ ವೈವಿಧ್ಯಮಯ ಜೀವ ಸಂಕುಲಗಳ ಕುರಿತು ಆಸಕ್ತಿ ಮೂಡಿಸುವಂತಹ ಕಾರ್ಯ ಯೋಜನೆಯ ಜಾರಿಗೆ ಚಿಂತನೆ ನಡಸಲಾಗಿದೆ ಎಂದು ಅರಣ್ಯ ಸಚಿವ ಆರ್.ಶಂಕರ್ ತಿಳಿಸಿದರು.
ಗುರುವಾರ ಯುವ ಚೇತನ ಯುವಜನ ಕೇಂದ್ರ, ಕಾಡಿನ ಮಿತ್ರ ಪತ್ರಿಕಾ ಸಂಸ್ಥೆ ನಗರದ ಕಬ್ಬನ್ ಉದ್ಯಾನವನದಲ್ಲಿರುವ ಎನ್‌ಜಿಒ ಸಭಾಂಗಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ, ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಅರಣ್ಯ ಇಲಾಖೆ ವತಿಯಿಂದ ಈಗಾಗಲೇ, ಮಗುಗೊಂದು ಸಸಿ-ಶಾಲೆಗೊಂದು ವನ ಕಾರ್ಯಕ್ರಮ ಚಾಲ್ತಿಯಲ್ಲಿದೆ. ಅದೇ ರೀತಿ, ಶಾಲಾ ಮಕ್ಕಳಿಗೆ ಅರಣ್ಯದ ಬಗ್ಗೆ ಮಾಹಿತಿ, ಪ್ರೀತಿ ಮೂಡಿಸಲು ಉಚಿತವಾಗಿ ಸಫಾರಿ ಕರೆದೊಯ್ಯುವ ಕಾರ್ಯಕ್ರಮದ ಜಾರಿಗೆ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಕಾಡು, ಪರಿಸರ ಉಳಿಸಲು ಸರಕಾರ ಹಾಗೂ ಸಂಘ ಸಂಸ್ಥೆಗಳು, ಶಾಲಾ-ಕಾಲೇಜುಗಳು ಶ್ರಮವಹಿಸುತ್ತಿವೆ. ಅಲ್ಲದೆ, ಮಾಲಿನ್ಯ ಹೆಚ್ಚಾದರೆ, ನಮ್ಮ ಜೀವಕ್ಕೆ ಅಪಾಯಕಾರಿ. ಹೀಗಾಗಿ, ಕಾಡನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಲಿ ಎಂದು ಅವರು ಆಶಿಸಿದರು.
ವನ್ಯ ಪ್ರಾಣಿಗಳು ಕಾಡಂಚಿನ ಕೃಷಿ ಬೆಳೆಗಳು ನಾಶವಾಗುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ರೈತರಿಗೆ ಅಪಾರ ನಷ್ಟವಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ, ಬೆಳೆಯಿಂದ ನಷ್ಟ ಉಂಟಾದ ರೈತರಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸೂಕ್ತವಾದ ನೀತಿಯನ್ನು ರೂಪಿಸಲಾಗುವುದು ಎಂದು ಅವರು ಹೇಳಿದರು.
ಚಿಕ್ಕಮಗಳೂರು ಭದ್ರ ಹುಲಿ ಪ್ರದೇಶದ ನಿರ್ದೇಶಕ ಎಚ್.ಸಿ.ಕಾಂತರಾಜು ಮಾತನಾಡಿ, ಜಗತ್ತಿನಲ್ಲಿಯೇ ಭಾರತದಲ್ಲಿ ಅಧಿಕ ಹುಲಿಗಳಿದ್ದು, ರಾಜ್ಯದಲ್ಲಿ 600ಕ್ಕೂ ಅಧಿಕ ಹುಲಿಗಳಿವೆ. ಹುಲಿ ಸಂರಕ್ಷಣೆಯಿಂದ ಸಸ್ಯಾಹಾರಿ ಜೀವಿಗಳ ಸಮತೋಲನ ಆಗಲಿದೆ. ಈ ನಿಟ್ಟಿನಲ್ಲಿ ಹುಲಿ ಸಂರಕ್ಷಣೆಗೆ ವಿಶೇಷ ಆದ್ಯತೆ ವಹಿಸಲಾಗಿದೆ ಎಂದು ತಿಳಿಸಿದರು. ರಾಜ್ಯ ಸರಕಾರವು, ಶಾಲಾ ಮಕ್ಕಳಿಗೆ ಚಿಣ್ಣರ ವನ ದರ್ಶನ ಎಂಬ ಕಾರ್ಯಕ್ರಮ ತಂದಿದೆ. ಇದರಿಂದ ಸಾವಿರಾರು ಮಕ್ಕಳು ಲಾಭ ಪಡೆಯುತ್ತಿದ್ದು, ಇಲಾಖೆಯಿಂದ ಅರಣ್ಯ, ವನ್ಯಜೀವಿ ಸಂರಕ್ಷಣಾ ಬಗ್ಗೆ ಮಾಹಿತಿ, ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಪರಿಸರವಾದಿ ನಂದಿದುರ್ಗ ಬಾಲುಗೌಡ ಮಾತನಾಡಿ, ಶಾಲಾ-ಕಾಲೇಜು ಮಕ್ಕಳಿಗೆ ಉಚಿತವಾಗಿ ಅರಣ್ಯ ಸುತ್ತುವ(ಸಫಾರಿ) ಅವಕಾಶ ನೀಡಬೇಕು. ಜೊತೆಗೆ, ಅರಣ್ಯದಲ್ಲಿ ಉಂಟಾಗುವ ಅಗ್ನಿ ಅವಘಡ ವೇಳೆ ಗಾಯಗೊಳ್ಳುವ, ಮೃತಪಡುವ ಅರಣ್ಯ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಶೀಘ್ರ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು.
’ಬಜೆಟ್‌ನಲ್ಲಿ ಅಧಿಕ ಹಣ’
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ 2018-19ನೆ ಸಾಲಿನ ನೂತನ ಬಜೆಟ್‌ನಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆಗೆ ಅಧಿಕ ಅನುದಾನ ನೀಡಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗಿದೆ
-ಆರ್.ಶಂಕರ್, ಅರಣ್ಯ ಸಚಿವ