ರೋಗಗಳ ತಡೆಗೆ ಆರೋಗ್ಯಕರ ಜೀವನಶೈಲಿ ಅಗತ್ಯ: ಉಪರಾಷ್ಟ್ರಪತಿ ವೆಂಕಯ್ಯನಾಯ್ಡು
ಕಿದ್ವಾಯಿ ರಾಜ್ಯ ಕ್ಯಾನ್ಸರ್ ಸಂಸ್ಥೆ ಸಂಕೀರ್ಣ ಉದ್ಫಾಟನೆ

ಬೆಂಗಳೂರು, ಜೂ.28: ರೋಗಗಳ ತಡೆಗೆ ಆರೋಗ್ಯಕರ ಆಹಾರ ಹಾಗೂ ಜೀವನ ಶೈಲಿಯನ್ನು ರೂಢಿಸಿಕೊಳ್ಳುವುದು ಬಹಳ ಅವಶ್ಯಕವಾಗಿದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ತಿಳಿಸಿದರು.
ಗುರುವಾರ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯಲ್ಲಿ ರಾಜ್ಯ ಕ್ಯಾನ್ಸರ್ ಸಂಸ್ಥೆಯ ಸಂಕೀರ್ಣ ಉದ್ಫಾಟಿಸಿ ಮಾತನಾಡಿದ ಅವರು, 120 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ರಾಜ್ಯ ಕ್ಯಾನ್ಸರ್ ಸಂಸ್ಥೆ ಸಂಕೀರ್ಣದಲ್ಲಿ ಅತ್ಯಾಧುನಿಕ ಉಪಕರಣಗಳಲ್ಲಿ ಜನರಿಗೆ ಒಳ್ಳೆಯ ಚಿಕಿತ್ಸೆ ದೊರೆಯುತ್ತದೆ. ಸಮಾಜದ ಕೆಳಸ್ತರದ ರೋಗಿಗಳಿಗೆ ಇದು ವರದಾನವಾಗಲಿದೆ ಎಂದು ಆಶಿಸಿದರು.
ಕ್ಯಾನ್ಸರ್ ರೋಗ ಬಾರದಂತೆ ಕ್ರಮವಹಿಸಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಈ ಬಗ್ಗೆ ಜನರಿಗೆ ಹೆಚ್ಚು ತಿಳುವಳಿಕೆ ಮೂಡಿಸಬೇಕಿದೆ. 2020 ರ ವೇಳೆಗೆ ಸುಮಾರು 17.30 ಲಕ್ಷ ಜನ ಕ್ಯಾನ್ಸರ್ ರೋಗಿಗಳು ಸೇರ್ಪಡೆಗೊಂಡು, 8.8ಲಕ್ಷ ಸಾವುಗಳು ಸಂಭವಿಸುತ್ತದೆಂದು ಅಂದಾಜಿಸಲಾಗಿದೆ. ಮಹಿಳೆಯರಲ್ಲಿ ಅತಿ ಹೆಚ್ಚು ಸ್ತನ ಕ್ಯಾನ್ಸರ್ ಹಾಗೂ ಪುರುಷರಲ್ಲಿ ಬಾಯಿ ಕ್ಯಾನ್ಸರ್ ಕಂಡುಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಶೇ.12.5ರಷ್ಟು ಜನ ಮಾತ್ರ ಕ್ಯಾನ್ಸರ್ ಮೊದಲನೆ ಹಂತದಲ್ಲಿ ಚಿಕ್ಸಿತೆಗೆ ಬರುತ್ತಾರೆ. ನಗರ ಪ್ರದೇಶದಲ್ಲಿ 15 ಪುರುಷರಲ್ಲಿ ಒಬ್ಬರಿಗೆ ಹಾಗೂ 12 ಮಹಿಳೆಯರಲ್ಲಿ ಒಬ್ಬರಿಗೆ ಕ್ಯಾನ್ಸರ್ ಬರುವ ಸಂಭವವಿದೆ. ಪ್ರಥಮ ಹಂತದಲ್ಲಿ ಪತ್ತೆಯಾದರೆ ಕ್ಯಾನ್ಸರ್ ಅನ್ನು ಸುಲಭವಾಗಿ ಗುಣಪಡಿಸಬಹುದೆಂದು ಅವರು ಹೇಳಿದರು.
ಜಂಕ್ ಫುಡ್ ಸೇವನೆ, ವ್ಯಾಯಾಮವಿಲ್ಲದ ಜೀವನ ಶೈಲಿ, ಕಲುಷಿತ ನೀರು, ಗಾಳಿಯಿಂದ ಬಹಳಷ್ಟು ಜನ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇಂತಹ ಮಾರಕ ರೋಗಗಳಿಂದ ಮುಕ್ತರಾಗಬೇಕಾದರೆ ನಮ್ಮ ಪೂರ್ವಿಕರ ಜೀವನ ಶೈಲಿಯನ್ನು ಪುನಃ ರೂಢಿಸಿಕೊಳ್ಳಬೇಕೆಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಕಿದ್ವಾಯಿ ಸಂಸ್ಥೆಯ ಹೊಸ ಸಂಕೀರ್ಣ ಹಾಗೂ ನೂತನ ಚಿಕಿತ್ಸಾ ಘಟಕ ಲೋಕಾರ್ಪಣೆಗೊಂಡಿರುವುದು ಸಂತಸದ ಸಂಗತಿಯಾಗಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡು ಕೈ ಜೋಡಿಸಿದೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಬಡವರಿಗೆ ಒಳ್ಳೆಯ ಚಿಕಿತ್ಸೆ ಲಭ್ಯವಾಗಬೇಕು. ಇಲ್ಲಿ ಮೂಳೆ ಮಜ್ಜೆ(Limposite, Bone Marrow) ಯ ಕಸಿ ಚಿಕಿತ್ಸೆ ಲಭ್ಯವಾಗಬೇಕಾಗಿದ್ದು, ಸರಕಾರ ಇದಕ್ಕೆ ಹೆಚ್ಚಿನ ನೆರವು ನೀಡಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಇದಕ್ಕೆ 35 ಲಕ್ಷ ರೂ. ತಗುಲಲಿದ್ದು, ಇದನ್ನು ಜನರಿಗೆ ಇಲ್ಲಿ ಕಡಿಮೆ ದರದಲ್ಲಿ ನೀಡಲು ಕ್ರಮವಹಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಜಲಸಂಪನ್ಮೂಲ ಇಲಾಖೆ ಸಚಿವ ಡಿ.ಕೆ. ಶಿವಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್, ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ ನಿರ್ದೇಶಕ ಡಾ. ಕೆ.ಬಿ. ಲಿಂಗೇಗೌಡ, ಶಾಸಕ ಉದಯ ಗರುಡಾಚಾರ್, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಸ್ ಸಚ್ಚಿದಾನಂದ ಉಪಸ್ಥಿತರಿದ್ದರು.
ವೈದ್ಯರ ವೃತ್ತಿ ಪವಿತ್ರವಾದದ್ದು, ಸರಕಾರಿ ಆಸ್ಪತ್ರೆಗಳಲ್ಲಿ ಜನರಿಗೆ ಉತ್ತಮ ಸ್ಪಂದನೆ ಹಾಗೂ ಚಿಕಿತ್ಸೆ ಸಿಗಬೇಕು. ಕ್ಯಾನ್ಸರ್‌ಅನ್ನು ಈಗ ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚಿದರೆ ಸಂಪೂರ್ಣ ಗುಣಪಡಿಸಬಹುದು. ಕೇಂದ್ರ ಸರಕಾರವು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಬೇಕು ಹಾಗೂ ರಾಜ್ಯದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಳು ಸಂಪೂರ್ಣ ಉಚಿತವಾಗಿರಬೇಕು.
-ವಜುಭಾಯಿ ವಾಲ, ರಾಜ್ಯಪಾಲ







