ಲೋಕಸಭಾ ಚುನಾವಣೆಯಲ್ಲಿ ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ: ಎಐಸಿಸಿ ಮುಖಂಡ ನದೀಮ್ ಜಾವೀದ್

ಬೆಂಗಳೂರು, ಜೂ.28: ದೇಶದಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷವು ಬಲಿದಾನ ನೀಡುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಸಮಾನ ಮನಸ್ಕ, ಜಾತ್ಯತೀತ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧವಿದೆ ಎಂದು ಎಐಸಿಸಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ನದೀಮ್ ಜಾವೀದ್ ತಿಳಿಸಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ವಿಧಾನಸಭಾ ಚುನಾವಣೆಯ ಫಲಿತಾಂಶ ಇನ್ನೂ ಅಧಿಕೃತವಾಗಿ ಹೊರ ಬೀಳುವ ಮುನ್ನವೇ ಕಾಂಗ್ರೆಸ್ ಪಕ್ಷವು ಜೆಡಿಎಸ್ ಪಕ್ಷಕ್ಕೆ ಸರಕಾರ ರಚಿಸಲು ಬೇಷರತ್ ಬೆಂಬಲ ನೀಡಿದ ಪರಿಣಾಮ ಇಂದು ರಾಜ್ಯದಲ್ಲಿ ಜಾತ್ಯತೀತ ಸರಕಾರ ಅಧಿಕಾರದಲ್ಲಿದೆ ಎಂದರು.
ಇಡೀ ದೇಶದಲ್ಲಿ ಜಾತ್ಯತೀತ ಪಕ್ಷಗಳು ಒಂದುಗೂಡಲು ಈ ಬೆಳವಣಿಗೆ ಸಹಕಾರಿಯಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ನದೀಮ್ ಜಾವೀದ್ ಹೇಳಿದರು.
ಸಂವಿಧಾನದ ಚೌಕಟ್ಟಿನಲ್ಲಿ ನಮ್ಮ ದೇಶದಲ್ಲಿ ಹಲವಾರು ಸಂಸ್ಥೆಗಳನ್ನು ರಚಿಸಲಾಗಿದೆ. ಆದರೆ, ಇಂದು ಈ ಸಂವಿಧಾನ ಬದ್ಧವಾದ ಸಂಸ್ಥೆಗಳು ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಿವೆ. ದೇಶವು ಫ್ಯಾಶಿಸ್ಟ್ ಶಕ್ತಿಗಳ ಕೈ ಸೇರುತ್ತಿದೆ ಎಂದು ಅವರು ತಿಳಿಸಿದರು.
ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಎಲ್ಲ ರಂಗಗಳಲ್ಲಿಯೂ ವಿಫಲವಾಗಿದೆ. ಇದಕ್ಕೆ, ಇತ್ತೀಚೆಗೆ ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶಗಳೇ ಸಾಕ್ಷಿ ಎಂದು ನದೀಮ್ ಜಾವೀದ್ ಹೇಳಿದರು.
ಜನರ ಗಮನವನ್ನು ಬೇರೆಡೆ ಸೆಳೆಯಲು ಮುಂದಿನ ಲೋಕಸಭಾ ಚುನಾವಣೆಗಾಗಿ ಮತಗಳನ್ನು ವಿಭಜಿಸಲು ಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲ ರಾಜ್ಯಗಳಲ್ಲಿಯೂ ಅಲ್ಪಸಂಖ್ಯಾತರ ವಿಭಾಗವನ್ನು ಬಲವರ್ಧನೆಗೊಳಿಸಲು, ರಾಜ್ಯಮಟ್ಟದ ಸಮಿತಿಗಳಲ್ಲಿ ಬದಲಾವಣೆ ತರಲಾಗುವುದು ಎಂದು ಅವರು ತಿಳಿಸಿದರು.
ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಪಕ್ಷವು ಅಲ್ಪಸಂಖ್ಯಾತರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವ ಸಂಬಂಧ ರಾಜ್ಯ ಸರಕಾರದ ಜೊತೆ ಚರ್ಚಿಸಲಾಗುವುದು ಎಂದು ನದೀಮ್ ಜಾವೀದ್ ಹೇಳಿದರು.







