ಸರಕಾರ ರಚನೆಗೆ ಬಿಜೆಪಿ ತಂತ್ರ: ಪರಿಷತ್ ಸದಸ್ಯ ರವಿಕುಮಾರ್
‘ಮೈತ್ರಿ ಪತನವಾದರೆ ಅವಕಾಶ ಬಳಸಿಕೊಳ್ತೀವಿ’
![ಸರಕಾರ ರಚನೆಗೆ ಬಿಜೆಪಿ ತಂತ್ರ: ಪರಿಷತ್ ಸದಸ್ಯ ರವಿಕುಮಾರ್ ಸರಕಾರ ರಚನೆಗೆ ಬಿಜೆಪಿ ತಂತ್ರ: ಪರಿಷತ್ ಸದಸ್ಯ ರವಿಕುಮಾರ್](https://www.varthabharati.in/sites/default/files/images/articles/2018/06/28/140319.jpg)
ಬೆಂಗಳೂರು, ಜೂ. 28: ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ತಾನಾಗಿಯೇ ಪತನವಾಗಲಿದೆ. ಸರಕಾರ ಪತನವಾದರೆ ಬಿಜೆಪಿ ಆ ಅವಕಾಶವನ್ನು ಬಳಸಿಕೊಂಡು ಸರಕಾರ ರಚನೆಗೆ ತಂತ್ರಗಾರಿಕೆ ಮಾಡಲಿದೆ ಎಂದು ಪರಿಷತ್ ಸದಸ್ಯ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾಳೆ(ಜೂ.29) ಇಲ್ಲಿನ ಅರಮನೆ ಮೈದಾನದಲ್ಲಿ ಬಿಜೆಪಿ ಕಾರ್ಯಕಾರಿಣಿ ನಡೆಯಲಿದ್ದು, ಮೈತ್ರಿ ಸರಕಾರದ ನಡೆ ಮತ್ತು ಬಿಜೆಪಿ ಮುಂದಿನ ಕ್ರಮಗಳ ಬಗ್ಗೆ ಮಹತ್ವದ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳ ಪೈಕಿ ಕನಿಷ್ಠ 25 ಸ್ಥಾನಗಳಲ್ಲಿ ಬಿಜೆಪಿ ಗೆಲುವಿಗೆ ಕಾರ್ಯತಂತ್ರ ಹಾಗೂ ಸರಕಾರ ಪತನವಾದರೆ ನಂತರ ಸರಕಾರ ರಚನೆಯ ತಂತ್ರಗಾರಿಕೆ ಬಗ್ಗೆಯೂ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ಮೌನವೇಕೆ?: ಮೈತ್ರಿ ಸರಕಾರದ ಬಗ್ಗೆ ಹೇಳಿಕೆ ನೀಡಿದ್ದ ಸಾಣೆಹಳ್ಳಿ ಶ್ರೀಗಳ ವಿರುದ್ಧ ಮೊದಲ ಸುದ್ದಿಗೋಷ್ಠಿಯಲ್ಲೆ ಬಹಿರಂಗ ಆಕ್ಷೇಪ ವ್ಯಕ್ತಪಡಿಸಿದ್ದ ಸಿಎಂ ಕುಮಾರಸ್ವಾಮಿ, ನಂಜಾವಧೂತ ಶ್ರೀಗಳ ಹೇಳಿಕೆಯ ಕುರಿತು ಮೌನ ವಹಿಸಿರುವುದು ಏಕೆ ಎಂದು ರವಿಕುಮಾರ್ ಪ್ರಶ್ನಿಸಿದರು.
‘ಮೈತ್ರಿ ಸರಕಾರ ಇನ್ನೂ ಟೇಕ್ ಆಫ್ ಆಗಿಲ್ಲ. ಸರಕಾರದ ನೇತೃತ್ವ ವಹಿಸಿರುವ ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡರ ಸಮಾಧಾನಪಡಿಸುವುದರಲ್ಲೆ ಕಾಲಹರಣ ಮಾಡುತ್ತಿದ್ದಾರೆ. ರೈತರ ಸಾಲಮನ್ನಾ ಮಾಡದಿದ್ದರೆ ರಾಜ್ಯ ಸರಕಾರದ ವಿರುದ್ಧ ಹೋರಾಟ ನಡೆಸಲಾಗುವುದು’
-ಶೋಭಾ ಕರಂದ್ಲಾಜೆ ಸಂಸದೆ