ವೇಶ್ಯಾವಾಟಿಕೆ ದಂಧೆ ಆರೋಪ: ಮಹಿಳೆ ಸೆರೆ
ಬೆಂಗಳೂರು, ಜೂ.28: ಹೊರ ಜಿಲ್ಲೆಗಳಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿ, ಇಬ್ಬರು ಯುವತಿಯರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಆರ್‌ಎಚ್‌ಸಿಎಸ್ ಲೇಔಟ್ ನಿವಾಸಿ ಸುಶೀಲಾ(30) ಬಂಧಿತ ಮಹಿಳೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಶ್ರೀಗಂಧಕಾವಲು ಆರ್‌ಎಚ್‌ಸಿಎಸ್ ಲೇಔಟ್ ಸಿ ಬ್ಲಾಕ್ ದ್ಯಾವಾನಿ ಶಾಲೆಯ ರಸ್ತೆಯ ಮನೆಯೊಂದರಲ್ಲಿ ಹೊರ ಜಿಲ್ಲೆಗಳಿಂದ ಯುವತಿಯರಿಗೆ ಹೆಚ್ಚಿಗೆ ಹಣ ಬರುವ ಕೆಲಸ ಕೊಡಿಸುವುದಾಗಿ ನಂಬಿಸಿ, ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆಂಬ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ ಸುಶೀಲಾ, ಹೊರ ಜಿಲ್ಲೆಯಿಂದ ಹುಡುಗಿಯರನ್ನು ಕೆಲಸ ಕೊಡಿಸುವುದಾಗಿ ನಂಬಿಸಿ ತಂದು, ಹೆಚ್ಚು ಹಣ ನೀಡುವ ಆಮಿಷವೊಡ್ಡಿ, ಗಿರಾಕಿಗಳನ್ನು ಮನೆಗೆ ಬರಮಾಡಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸಿ ಅಕ್ರಮವಾಗಿ ಹಣ ಸಂಪಾದನೆ ಮಾಡಿ ಜೀವನ ಸಾಗಿಸುತ್ತಿರುವುದಾಗಿ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ವೇಶ್ಯಾವಾಟಿಕೆಗೆ ಬಳಸಲು ಕರೆತಂದಿದ್ದ ಹೊರ ಜಿಲ್ಲೆಯ ಮತ್ತು ಸ್ಥಳೀಯ ಇಬ್ಬರು ಯುವತಿಯರನ್ನು ರಕ್ಷಣೆ ಮಾಡಿ, 2 ಸಾವಿರ ರೂ. ನಗದು, ಒಂದು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







