ಮಸ್ಕುಲರ್ ಡಿಸ್ಟ್ರೊಫಿ ಬಾಧಿತ ರೋಗಿಗಳಿಗೆ ಸ್ಟೆಮ್ ಸೆಲ್ ಥೆರಪಿ
ಮಂಗಳೂರು, ಜೂ.28: ಮಸ್ಕುಲರ್ ಡಿಸ್ಟ್ರೊಫಿ ಬಾಧಿತ ರೋಗಿಗಳಿಗೆ ಸ್ಟೆಮ್ ಸೆಲ್ ಥೆರಪಿ ನೀಡಿ ಗುಣಪಡಿಸಬಹುದಾಗಿದೆ ಎಂದು ಮುಂಬೈ ಮೂಲದ ನ್ಯೂರೊಜೆನ್ ಬ್ರೈನ್ ಆ್ಯಂಡ್ ಸ್ಪೈನ್ ಇನ್‌ಸ್ಟಿಟ್ಯೂಟ್‌ನ ಡಾ. ನಂದಿನಿ ಗೋಕುಲ್‌ಚಂದ್ರನ್ ತಿಳಿಸಿದ್ದಾರೆ.
ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಮಸ್ಕುಲರ್ ಡಿಸ್ಟ್ರೊಫಿ ವಿಶ್ವಾದ್ಯಂತ ಹಬ್ಬಿದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ರೋಗ ಇದಾಗಿದೆ. ಡ್ಯೂಷೆನ್ ಮಸ್ಕುಲರ್ ಡಿಸ್ಟ್ರೊಫಿಯು ಪ್ರತೀ ವರ್ಷ ಜನಿಸುವ 3,500ರಿಂದ 8 ಸಾವಿರ ಗಂಡು ಮಕ್ಕಳಲ್ಲಿ ಒಂದು ಮಗುವಿಗೆ ಕಾಣಿಸಿಕೊಳ್ಳುತ್ತದೆ. ಭಾರತದಲ್ಲೂ ಕೂಡ ಈ ರೋಗದ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ಹೋಗಲಾಡಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಕೂಡ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಈ ರೋಗವು ವ್ಯಕ್ತಿಯ ಜೀವಿತಾವಧಿ ಮತ್ತು ಜೀವನದ ಗುಣಮಟ್ಟಕ್ಕೆ ಗಂಭೀರವಾದ ಹಾನಿಯುಂಟು ಮಾಡುತ್ತದೆ. ಇದು ಸ್ನಾಯುಗಳು ನಶಿಸುವಂತೆ ಮಾಡುತ್ತದೆ. ಉಸಿರಾಟದ ತೊಂದರೆ, ಹೃದಯ ವೈಫಲ್ಯವಲ್ಲದೆ ಸಾವಿಗೂ ಕಾರಣವಾಗುವ ಸಾಧ್ಯತೆ ಇದೆ. ಇದು ಗುಣಪಡಿಸಲಾಗದ ರೋಗ ಎಂಬ ಭಾವನೆ ಸಾರ್ವತ್ರಿಕವಾಗಿದೆ. ಆದರೆ, ಸಕಾಲದಲ್ಲಿ ಇದಕ್ಕೆ ಚಿಕಿತ್ಸೆ ನೀಡಿದರೆ ಬದುಕಿಸಲು ಸಾಧ್ಯವಿದೆ ಎಂದರು.
ಈ ಸಂದರ್ಭ ಈ ರೋಗಕ್ಕೆ ತುತ್ತಾಗಿ ಭಾಗಶಃ ಗುಣಮುಖರಾಗಿರುವ 14ರ ಹರೆಯದ ಬೆಂಗಳೂರಿನ ರವಿ-ಮಂಜುಳಾ ದಂಪತಿಯ ಪುತ್ರ ಕುಶಾಲ್ ಮಾತನಾಡಿ, ನಾನು 6 ತರಗತಿಯವರೆಗೆ ಎಲ್ಲರಂತೆ ಸಾಮಾನ್ಯ ಹುಡುಗನಾಗಿದ್ದೆ. ಆದರೆ, 11ನೆ ವರ್ಷಕ್ಕೆ ನನಗೆ ಈ ರೋಗ ಕಾಣಿಸಿಕೊಂಡಿತು. ಅಂದರೆ ದೇಹದ ಕೆಳಭಾಗದಲ್ಲಿ ದೌರ್ಬಲ್ಯ ಕಂಡು ಬಂತು. ನಿದ್ದೆಯಲ್ಲಿ ಪಕ್ಕ ಸರಿಯಲು, ಹಾಸಿಗೆಯಿಂದ ಏಳಲು, ಕುರ್ಚಿಯಲ್ಲಿ ಕೂರಲು ಸಾಧ್ಯವಾಗಲಿಲ್ಲ. ನನ್ನ ಹೆತ್ತವರು ಬೆಂಗಳೂರಿನ ಹಲವು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಎಲ್ಲರೂ ಇದೊಂದು ವಿಚಿತ್ರ ರೋಗ. ಇದಕ್ಕೆ ಔಷಧವಿಲ್ಲ ಎಂದರು. ಈ ಮಧ್ಯೆ ನನ್ನ ಬೇಸರ ಕಳೆಯಲು ಕಂಪ್ಯೂಟರ್ ತೆಗೆದುಕೊಟ್ಟರು. ಆಸಕ್ತಿಯಿಂದ ನಾನು ನನ್ನೀ ರೋಗದ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದಾಗ ಮುಂಬೈಯ ನ್ಯೂರೊಜೆನ್ ಬ್ರೈನ್ ಆ್ಯಂಡ್ ಸ್ಪೈನ್ ಇನ್‌ಸ್ಟಿಟ್ಯೂಟ್ ಬಗ್ಗೆ ತಿಳಿದುಕೊಂಡೆ. ಬಳಿಕ ಅಲ್ಲಿಂದಲೇ ಚಿಕಿತ್ಸೆ ಪಡೆದು ಭಾಗಶಃ ಗುಣಮುಖನಾದೆ. ಇದೀಗ ನಾನು ಕಾಲೇಜಿಗೂ ಹೋಗುತ್ತಿದ್ದೇನೆ. ಭವಿಷ್ಯದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಬೇಕೆಂದಿದ್ದೇನೆ ಎಂದರು.
ಜುಲೈ 15ರಂದು ಬೆಂಗಳೂರಿನಲ್ಲಿ ನರಸಂಬಂಧಿ ರೋಗಗಳಿಗೆ ಉಚಿತ ಕಾರ್ಯಾಗಾರ ಮತ್ತು ಒಪಿಡಿ ಕನ್ಸಲ್ಟೇಶನ್ ಶಿಬಿರ ಆಯೋಜಿಸಲಾಗಿದೆ. ನ್ಯೂರೋಜನ್ ಬೆನ್ನುಮೂಳೆಯ ಗಾಯ, ಮಸ್ಕುಲರ್ ಡಿಸ್ಟ್ರೋಫಿ, ಆಟಿಸಂ, ಸೆರೆಬ್ರಲ್ ಪಾಲ್ಸಿ ಇತ್ಯಾದಿ ರೋಗಕ್ಕೆ ಸಂಬಂಧಿಸಿ ಶಿಬಿರ ಆಯೋಜಿಸಲಾಗಿದೆ. ಆಸಕ್ತರು ಮೊ.ಸಂ:09920200400/09821529653ನ್ನು ಸಂಪರ್ಕಿಬಹುದು.







