ಸ್ಕಾರ್ಫ್ ವಿವಾದ: ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮಕ್ಕೆ ಎಸ್‌ಡಿಪಿಐ ಆಗ್ರಹ
ಮಂಗಳೂರು, ಜೂ.28: ದ.ಕ.ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಸಂದರ್ಭದಲ್ಲಿ ಕೆಲವೊಂದು ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ವಸ್ತ್ರ ಸಂಹಿತೆಯ ವಿಚಾರದಲ್ಲಿ ವಿವಾದಗಳನ್ನು ಸೃಷ್ಟಿಸಿ ಶಿಕ್ಷಣವನ್ನು ಮೊಟಕುಗೊಳಿಸುವಂತೆ ಮಾಡುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಇದೀಗ ನಗರದ ಸಂತ ಆ್ಯಗ್ನೆಸ್ ಕಾಲೇಜಿನ ವಿದ್ಯಾರ್ಥಿನಿಯರು ಸ್ಕಾರ್ಪ್ ಧರಿಸಬಾರದೆಂದು ನಿರ್ಬಂಧ ಹೇರಿ ಕಾಲೇಜಿನಿಂದ ಹೊರಹಾಕಿದ ಕೃತ್ಯ ಖಂಡನೀಯ ಎಂದು ದ.ಕ.ಜಿಲ್ಲಾ ಎಸ್‌ಡಿಪಿಐ ಹೇಳಿಕೆಯಲ್ಲಿ ತಿಳಿಸಿದೆ.
ಇದು ದೇಶದ ಸಂವಿಧಾನವು ಜನತೆಗೆ ನೀಡಿದ ಧಾರ್ಮಿಕ ಸ್ವಾತಂತ್ರ್ಯದ ವಿರುದ್ದವಾಗಿದೆ. ಇದು ಖಂಡನೀಯವಾಗಿದೆ. ಅಲ್ಲದೆ ಮಾಜಿ ಶಾಸಕ ಜೆ.ಆರ್. ಲೋಬೊ ಮತ್ತು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಅವರ ಮೌನವು ಮುಸ್ಲಿಮರ ಮೇಲಿರುವ ಅವರ ನಂಬಿಕೆಯನ್ನು ಪ್ರಶ್ನಿಸುವಂತಿದೆ. ವಿದ್ಯಾರ್ಥಿನಿಯರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಸರಕಾರವು ಕೂಡಲೇ ಕಠಿಣ ಕಾನೂನು ಕೈಗೊಳ್ಳಬೇಕು ಎಂದು ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅಥಾವುಲ್ಲ ಜೋಕಟ್ಟೆ ಆಗ್ರಹಿಸಿದ್ದಾರೆ.







