ಸ್ಕಾರ್ಫ್ ವಿವಾದ: ಸರಕಾರ ಮಧ್ಯಪ್ರವೇಶಕ್ಕೆ ದಾರಿಮಿ ಉಲಮಾ ಒಕ್ಕೂಟ ಆಗ್ರಹ
ಮಂಗಳೂರು, ಜೂ.28: ಕರಾವಳಿ ಜಿಲ್ಲೆಗಳಲ್ಲಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ನಿರಂತರ ಮರುಕಳಿಸುತ್ತಿರುವ ಸ್ಕಾರ್ಫ್ ವಿವಾದಕ್ಕೆ ತಾರ್ಕಿಕ ಅಂತ್ಯ ಹಾಕಲು ರಾಜ್ಯ ಸರಕಾರ ಮಧ್ಯಪ್ರವೇಶಿಸಿ ಶಾಶ್ವತ ಪರಿಹಾರ ರೂಪಿಸಲು ಮುಂದೆ ಬರಬೇಕು ಎಂದು ರಾಜ್ಯ ದಾರಿಮಿ ಉಲಮಾ ಒಕ್ಕೂಟ ಆಗ್ರಹಿಸಿದೆ.
ಸಮಾನತೆಯ ಹೆಸರಲ್ಲಿ ವಸ್ತ್ರಸಂಹಿತೆ ರೂಪಿಸುವಾಗ ವಿದ್ಯಾಸಂಸ್ಥೆಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ಎಚ್ಚರ ವಹಿಸಬೇಕಾಗಿದೆ. ದೇಶದ ವೈವಿಧ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಇದು ಬಹಳ ಅಗತ್ಯವೂ ಆಗಿದೆ. ಸಿಖ್ ವಿದ್ಯಾರ್ಥಿಗಳು ಪೇಟ ಮತ್ತು ಕ್ರೈಸ್ತ ಭಗಿನಿಯರು ಶಿರೋವಸ್ತ್ರ ಧರಿಸುತ್ತಾರೆ. ಅದೇ ರೀತಿ ಬೇರೆ ಬೇರೆ ಜಾತಿ ಜನಾಂಗದವರು ಇತರರಿಗೆ ತೊಂದರೆಯಾಗದಂತೆ ಅವರವರ ಧಾರ್ಮಿಕ ಕುರುಹುಗಳನ್ನು ಅಳವಡಿಸಿಕೊಳ್ಳುತ್ತಿದ್ದು ಇದರ ಬಗ್ಗೆ ಯಾವುದೇ ಚಕಾರವೆತ್ತದ ಕೆಲ ಶಿಕ್ಷಣ ಸಂಸ್ಥೆಗಳು ಮುಸ್ಲಿಂ ಮಹಿಳೆಯರ ಸಭ್ಯತೆಯ ಪ್ರತೀಕವಾಗಿ ಧರಿಸುತ್ತಿರುವ ಸ್ಕಾರ್ಫ್‌ಗೆ ನಿಷೇಧ ಹೇರಿ ತಾರತಮ್ಯ ನೀತಿ ಅನುಸರಿಸುವುದು ಖಂಡನೀಯವಾಗಿದೆ ಎಂದು ದಾರಿಮಿ ಉಲಮಾ ಒಕ್ಕೂಟದ ಅಧ್ಯಕ್ಷ ಎಸ್.ಬಿ. ದಾರಿಮಿ ಮತ್ತು ಮೌಲಾನಾ ಯು.ಕೆ. ದಾರಿಮಿ ಚೊಕ್ಕಬೆಟ್ಟು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





