ವಂದೇ ಮಾತರಂ ಗೀತೆಗೆ ಸೆನ್ಸಾರ್ ಮಾಡಿದ ಕಾಂಗ್ರೆಸ್ ತಪ್ಪಿನಿಂದ ದೇಶ ವಿಭಜನೆ: ಅಮಿತ್ ಶಾ

ಕೋಲ್ಕತಾ, ಜೂ.28: ತನ್ನ ತುಷ್ಟೀಕರಣ ನೀತಿಯ ಭಾಗವಾಗಿ ಕಾಂಗ್ರೆಸ್ ಪಕ್ಷವು ವಂದೇಮಾತರಂ ಗೀತೆಯನ್ನು ಸೆನ್ಸಾರ್ ಮಾಡಿದ ತಪ್ಪಿನಿಂದಾಗಿ ದೇಶದ ವಿಭಜನೆಯಾಗಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಡಾ ಶ್ಯಾಮಪ್ರಸಾದ್ ಮುಖರ್ಜಿ ರಿಸರ್ಚ್ ಫೌಂಡೇಶನ್ ವತಿಯಿಂದ ಆಯೋಜಿಸಲಾದ ಬಂಕಿಮಚಂದ್ರ ಛಟ್ಟೋಪಾಧ್ಯಾಯ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಖಿಲಾಫತ್ ಚಳವಳಿ ಅಥವಾ ಮುಸ್ಲಿಂಲೀಗ್‌ನ ಎರಡು ರಾಷ್ಟ್ರ ಸಿದ್ಧಾಂತ ದೇಶದ ವಿಭಜನೆಗೆ ಕಾರಣ ಎಂದು ಇತಿಹಾಸತಜ್ಞರು ದೂರುತ್ತಿದ್ದಾರೆ. ಆದರೆ ವಂದೇಮಾತರಂ ಗೀತೆಯನ್ನು ಸೆನ್ಸಾರ್ ಮಾಡುವ ಕಾಂಗ್ರೆಸ್‌ನ ತುಷ್ಟೀಕರಣ ನೀತಿ ಮುಂದಿನ ದಿನದಲ್ಲಿ ದೇಶದ ವಿಭಜನೆಗೆ ಕಾರಣ ಎಂಬುದು ತನಗೆ ಖಚಿತವಾಗಿದೆ ಎಂದು ಅಮಿತ್ ಶಾ ಹೇಳಿದರು.
ವಂದೇಮಾತರಂ ಯಾವುದೇ ನಿರ್ದಿಷ್ಟ ಧರ್ಮ ಅಥವಾ ಧಾರ್ಮಿಕ ನಂಬಿಕೆಗೆ ಸಂಬಂಧಿಸಿಲ್ಲ. ಈ ಗೀತೆ ಯಾವುದೇ ಸಮುದಾಯವನ್ನು ಟೀಕಿಸಿಲ್ಲ ಅಥವಾ ಲೇವಡಿ ಮಾಡಿಲ್ಲ. ಈ ಗೀತೆ ದೇಶವನ್ನು ಜನತೆಯೊಂದಿಗೆ ಸಂಪರ್ಕಿಸಲು ಪ್ರಯತ್ನಿಸಿದೆ ಮತ್ತು ಇದನ್ನು ರಚಿಸಿದ ಪ್ರದೇಶದ ಸಂಸ್ಕೃತಿ ಮತ್ತು ಸಂಪ್ರದಾಯ ಈ ಗೀತೆಯಲ್ಲಿ ವ್ಯಕ್ತವಾಗಿದೆ. ಆದರೆ ವಂದೇಮಾತರಂ ಗೀತೆಗೆ ಧರ್ಮವನ್ನು ಎಳೆದುತಂದಿರುವುದುಒಂದು ದೊಡ್ಡ ತಪ್ಪಾಗಿದೆ ಎಂದು ಶಾ ಹೇಳಿದ್ದಾರೆ.
ವಂದೇಮಾತರಂ ಗೀತೆ ರಚಿಸಿದ ಬಂಕಿಮಚಂದ್ರ ಚಟರ್ಜಿ ಭಾರತೀಯ ಸಂಸ್ಕೃತಿಯ ತತ್ವಗಳ ಹಿನ್ನೆಲೆಯಿಂದ ಬಂದವರಾಗಿದ್ದರು. ಭಾರತದ ರಾಷ್ಟ್ರೀಯತೆಯ ವ್ಯಾಖ್ಯಾನ ಸಂಕುಚಿತವಾಗಿಲ್ಲ ಎಂದವರು ಹೇಳಿದರು.
ಭಾರತೀಯ ಜನಸಂಘದ ಸ್ಥಾಪಕ ಡಾ ಶ್ಯಾಮಪ್ರಸಾದ್ ಮುಖರ್ಜಿ ಆರಂಭದಲ್ಲಿ ನೆಹರೂ ಸರಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದರು. ಆದರೆ ಸ್ವತಂತ್ರ ಭಾರತದಲ್ಲಿ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ರೂಪಿಸಲಾದ ನೀತಿಗಳು ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಪ್ರಭಾವಿತವಾಗಿವೆ ಹಾಗೂ ಭಾರತೀಯ ಸಂಸ್ಕೃತಿಯ ಗಂಧಗಾಳಿಯಿಂದ ಹೊರತಾಗಿದೆ ಎಂಬ ಕಾರಣಕ್ಕೆ ಮುಖರ್ಜಿ ಕಾಂಗ್ರೆಸ್‌ನಿಂದ ಹೊರಬಂದು ಜನಸಂಘವನ್ನು ಸ್ಥಾಪಿಸಿದರು ಎಂದು ಶಾ ಹೇಳಿದರು.
ಸಾಹಿತಿ ಬುದ್ಧದೇವ ಗುಹಾ, ಬಂಕಿಮ್‌ಚಂದ್ರ ಛಟ್ಟೋಪಾಧ್ಯಾಯರ ಜೀವನಚರಿತ್ರೆಯ ಲೇಖಕ ಅಮಿತ್ರಸೂದನ್ ಭಟ್ಟಾಚಾರ್ಯ, ಪ್ರೊ. ಪೂರಬಿ ರಾಯ್ , ಪಶ್ಚಿಮಬಂಗಾಳ ಬಿಜೆಪಿ ಘಟಕಾಧ್ಯಕ್ಷ ದಿಲೀಪ್ ಘೋಷ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.







