ಶಿಕ್ಷಣದೊಂದಿಗೆ ಆಚಾರ ಕಲಿಸಿ: ಡಾ.ಡಿ.ವೀರೇಂದ್ರ ಹೆಗ್ಡೆ

ಬೆಂಗಳೂರು, ಜೂ.28: ಜೈನ ಸಮುದಾಯದ ಮಕ್ಕಳಿಗೆ ಶಿಕ್ಷಣದೊಂದಿಗೆ ಧರ್ಮದ ಪರಿಚಯ, ಆಚಾರ ವಿಚಾರಗಳನ್ನು ಕಲಿಸಬೇಕು ಎಂದು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಡೆ ಇಂದಿಲ್ಲಿ ಹೇಳಿದರು.
ಗುರುವಾರ ನಗರದ ಕರ್ನಾಟಕ ಜೈನ ಭವನದಲ್ಲಿ ಆಯೋಜಿಸಿದ್ದ, ಕರ್ನಾಟಕ ಜೈನ್ ಅಸೋಸಿಯೇಷನ್(ಕೆಜೆಎ) ಹಾಗೂ ಮೋತಿಖಾನೆ ತಿಮ್ಮಪ್ಪಯ್ಯ ಜೈನ ವಿದ್ಯಾರ್ಥಿ ನಿಲಯದ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜೈನ ಧರ್ಮದಲ್ಲಿ ಪ್ರಾಣಿ ಹಿಂಸೆ, ಮಾಂಸಾಹಾರ ಸೇವನೆ ಮಾಡುವಂತಿಲ್ಲ. ಹಾಗಾಗಿ ಧರ್ಮಸ್ಥಳದಲ್ಲಿರುವ ನಮ್ಮ ಶಿಕ್ಷಣ ಸಂಸ್ಥೆಗಳನ್ನು ವೆಜಿಟೇರಿಯನ್ ಕ್ಯಾಂಪಸ್ ಮಾಡಿದ್ದೇವೆ. ದೇಶ-ವಿದೇಶ ವಿದ್ಯಾರ್ಥಿಗಳು ಕಲಿಯುತ್ತಿದ್ದು, ನಮ್ಮ ಸಂಸ್ಕಾರಗಳನ್ನು ಅವರೂ ಪಾಲಿಸುತ್ತಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಹಲವೆಡೆ ಇರುವ ಸಮುದಾಯದ ವಿದ್ಯಾರ್ಥಿ ನಿಲಯ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಈಗಿನ ಕಾಲಕ್ಕೆ ತಕ್ಕಂತೆ ಅಭಿವೃದ್ಧಿಪಡಿಸಬೇಕು. ವಿದ್ಯಾರ್ಥಿ ನಿಲಯಗಳನ್ನು ಕೇವಲ ಬಡವರಿಗೆ ಸೀಮಿತಗೊಳಿಸದೆ ಸರ್ವರಿಗೂ ಪ್ರವೇಶ ಕಲ್ಪಿಸಿ ಸಂಸ್ಕಾರವಂತರನ್ನಾಗಿ ಬೆಳೆಸಬೇಕಿದೆ ಎಂದು ನುಡಿದರು.
ಎಂ.ಎಲ್.ವರ್ಧಮಾನಯ್ಯ ಅವರು ದೂರದೃಷ್ಟಿ ಇರಿಸಿಕೊಂಡು ನೂರು ವರ್ಷದ ಹಿಂದೆ ಸ್ಥಾಪಿಸಿದ್ದ ಮೈಸೂರು ಜೈನ ಅಸೋಸಿಯೇಷನ್ ಕರ್ನಾಟಕ ಜೈನ ಅಸೋಸಿಯೇಷನ್ ಹೆಸರಿನಲ್ಲಿ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ಈ ಸಂಘ ಮುನ್ನಡೆಸಿದ ಮೋತಿಖಾನೆ ತಿಮ್ಮಪ್ಪಯ್ಯ ಜೈನ ವಿದ್ಯಾರ್ಥಿ ನಿಲಯವು ಸಾವಿರಾರು ವಿದ್ಯಾರ್ಥಿಗಳು ತಮ್ಮ ಬದುಕು ರೂಪಿಸಿಕೊಳ್ಳಲು ನೆರವಾಗಿದೆ. ಶಿಕ್ಷಣದ ಜತೆಗೆ ಸಂಸ್ಕಾರವನ್ನೂ ಕಲಿಸಿದೆ ಎಂದ ಅವರು ಹೇಳಿದರು.
ಶ್ರವಣಬೆಳಗೊಳದ ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಎಂ.ಎಲ್.ವರ್ಧಮಾನಯ್ಯ ಮತ್ತು ಮೋತಿಖಾನೆ ಪದ್ಮನಾಭಯ್ಯ ಅವರು ಸಮುದಾಯ ಅಭಿವೃದ್ಧಿಗೆ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಇಂದು ನಾವೆಲ್ಲ ಸಮಾಜದ ಪುನರ್ ನಿರ್ಮಾಣದ ನಿಟ್ಟಿನಲ್ಲಿ ಮುನ್ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಕೆಜೆಎ ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಸುರೇಂದ್ರ ಕುಮಾರ್, ಕಾರ್ಯಾಧ್ಯಕ್ಷ ಪಿ.ವೈ.ರಾಜೇಂದ್ರ ಕುಮಾರ್, ಕರ್ನಾಟಕ ಜೈನ ಅಸೋಸಿಯೇಷನ್ ಅಧ್ಯಕ್ಷ ಎಸ್.ಜಿತೇಂದ್ರ ಕುಮಾರ್, ದಕ್ಷಿಣ ಭಾರತ ಜೈನ್ ಸಭಾದ ಅಧ್ಯಕ್ಷ ರಾವಸಾಹೇಬ ಎ.ಪಾಟೀಲ ಸೇರಿ ಪ್ರಮುಖರಿದ್ದರು.







