ಸಿ.ಎಂ ನಿವಾಸದ ಮುಂದೆ ಪೊಲೀಸ್ ಉದ್ಯೋಗಾಕಾಂಕ್ಷಿಗಳಿಂದ ಪ್ರತಿಭಟನೆ: ವಯೋಮಿತಿ ಸಡಿಲಿಕೆಗೆ ಒತ್ತಾಯ
ಬೆಂಗಳೂರು, ಜೂ.28: ಪೊಲೀಸ್ ಇಲಾಖೆಯ ಪೇದೆ ಹುದ್ದೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳ ವಯೋಮಿತಿ ಸಡಿಲಿಕೆಗೆ ಆಗ್ರಹಿಸಿ ಪೊಲೀಸ್ ಉದ್ಯೋಗಾಕಾಂಕ್ಷಿಗಳು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿವಾಸದ ಮುಂಭಾಗ ಪ್ರತಿಭಟನೆ ನಡೆಸಿದರು.
ಗುರುವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜೆ.ಪಿ.ನಗರದ ನಿವಾಸದ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ರಾಜ್ಯ ನಾಗರಿಕ ಪೊಲೀಸ್ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ವಯೋಮಿತಿ ಸಡಿಲಿಕೆ ಮಾಡುವಂತೆ ಆಗ್ರಹಿಸಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಉದ್ಯೋಗಾಕಾಂಕ್ಷಿ ನಾಗೇಶ್, ಪೊಲೀಸ್ ಇಲಾಖೆಯ ಹುದ್ದೆಗಳಲ್ಲಿ ಮಯೋಮಿತಿ ಸಾಮಾನ್ಯ ವರ್ಗಕ್ಕೆ 25, ಎಸ್ಸಿ-ಎಸ್ಟಿ ಹಾಗೂ ಓಬಿಸಿಗೆ 27 ವರ್ಷ ನಿಗದಿಗೊಳಿಸಲಾಗಿದೆ. ಈ ವಯೋಮಿತಿಯಲ್ಲಿ ಕನಿಷ್ಠ 2 ವರ್ಷ ಸಡಿಲಿಕೆ ನೀಡಬೇಕು ಎಂದರು.
ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಪಿಎಸ್ಸೈ ಹುದ್ದೆಗಳ ನೇಮಕಾತಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಿದೆ. ಆದರಂತೆ ಪೊಲೀಸ್ ಪೇದೆ ಹುದ್ದೆಗಳಿಗೆ ಸಡಿಲಿಕೆ ನೀಡಬೇಕು. ಅಲ್ಲದೆ, ನೆರೆಯ ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು ಸೇರಿ ಇನ್ನಿತರೆ ರಾಜ್ಯಗಳಲ್ಲಿ ಸಾಮಾನ್ಯ ವರ್ಗಕ್ಕೆ ಕ್ರಮವಾಗಿ 28, 30, 26, 35, ಎಸ್ಸಿ-ಎಸ್ಟಿಗೆ 30, 40, 29, 42 ವರ್ಷ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.





