ಹನೂರು: ಮಲೆಮಹದೇಶ್ವರ ಬೆಟ್ಟದ ಹುಂಡಿಗಳ ಎಣಿಕೆ; 1.08 ಕೋಟಿ ರೂ ಸಂಗ್ರಹ
ಹನೂರು,ಜೂ.28: ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ನಡೆದ ಹುಂಡಿಗಳ ಎಣಿಕೆಯಲ್ಲಿ ಈ ಬಾರಿ 1.08 ಕೋಟಿ ರೂ ಸಂಗ್ರಹವಾಗಿದೆ.
ಮ.ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಗುರುವಾರ ಬೆಳಗ್ಗೆ ಸಾಲೂರು ಬೃಹನ್ಮಾಠಧ್ಯಕ್ಷ ಗುರುಸ್ವಾಮೀಜಿ ಅವರ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮರಾ ಕಣ್ಗಾವಲು ಹಾಗೂ ಪೋಲಿಸ್ ಬಂದೋಬಸ್ತಿನಲ್ಲಿ ಎಣಿಕೆ ಕಾರ್ಯ ಪ್ರಾರಂಭ ಮಾಡಲಾಯಿತು. ಎಣಿಕೆ ಕಾರ್ಯ ಸಂಜೆ 7ರವರೆಗೆ ನಡೆಯಿತು.
ಈ ಬಾರಿ ಅಮಾವಾಸ್ಯೆ, ಹುಣ್ಣಿಮೆ ಹಾಗೂ ಇನ್ನಿತರ ವಿಶೇಷ ಸಂದರ್ಭದಲ್ಲಿ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮ.ಬೆಟ್ಟಕ್ಕೆ ಭೇಟಿ ನೀಡಿದ್ದು, ಹಣ, ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಹುಂಡಿಗೆ ಹಾಕಿದ್ದರು. ಈ ಹಿನ್ನಲೆಯಲ್ಲಿ 1,08,14553 ರೂ ನಗದು, ಚಿನ್ನ 102 ಗ್ರಾಂ ಹಾಗೂ 1,596 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
ಎಣಿಕೆ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ, ಉಪ ಕಾರ್ಯದರ್ಶಿ ರಾಜಶೇಖರಮೂರ್ತಿ, ಅಧೀಕ್ಷಕ ಬಸವರಾಜು, ಇಂಜಿನಿಯರ್ ಮನ್ವಚಾರ್ಯ, ಲೆಕ್ಕಾಧೀಕ್ಷಕ ಮಹದೇವಸ್ವಾಮಿ, ಕಚೇರಿ ಅಧೀಕ್ಷಕ ಮಾದರಾಜು, ಎಸ್‍ಬಿಐ ವ್ಯವಸ್ಥಾಪಕ ಸೆಂದಿಲ್ ನಾಥನ್, ದೇಗುಲದ ನೌಕರರು ಹಾಗೂ ಇನ್ನಿತರರು ಇದ್ದರು.