ಮಂಗಳೂರು: ರೈಲ್ವೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ
ಮಂಗಳೂರು, ಜೂ.28: ನಗರದ ಸ್ಟೇಟ್ ಬ್ಯಾಂಕ್ ಬಳಿ ಪರಿಚಯವಾದ ಅಪರಿಚಿತ ವ್ಯಕ್ತಿ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸಿ, ಬ್ಯಾಗ್‌ನಲ್ಲಿದ್ದ ನಗದು ಹಣ, ಮೊಬೈಲ್‌ನ್ನು ಕಳವುಗೈದ ಘಟನೆ ನಡೆದಿದೆ.
ಪುತ್ತೂರು ತಾಲೂಕಿನ ಕುಡಿಪಾಡಿ ಗ್ರಾಮದ ನಿವಾಸಿ ಅಶ್ರಫ್ ಪಲ್ಲತರು ವಂಚನೆಗೊಳಗಾದವರು.
ಅಶ್ರಫ್‌ಗೆ ಜೂ. 23ರಂದು ನಗರದ ಸ್ಟೇಟ್ ಬ್ಯಾಂಕ್ ಬಳಿ ಅಪರಿಚಿತನೋರ್ವ ಪರಿಚಯವಾಗಿದ್ದಾನೆ. ವ್ಯಕ್ತಿಯು ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ತಿಳಿಸಿ, ಜೂ. 25ಕ್ಕೆ ಮಂಗಳೂರಿಗೆ ಬರಲು ಹೇಳಿದ್ದಾನೆ. ವ್ಯಕ್ತಿಯು ಜೂ. 25ರಂದು ಬೆಳಗ್ಗೆ 11ಕ್ಕೆ ಮಂಗಳೂರು ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲಿ ಸಿಕ್ಕಿದ್ದಾನೆ. ಬಳಿಕ ಆ ವ್ಯಕ್ತಿಯು ಅಶ್ರಫ್ ಅವರನ್ನು ರೈಲ್ವೆ ಸಾಫ್ಟವೇರ್ ಅಪ್‌ಲೋಡ್ ಮಾಡುವ ಬಗ್ಗೆ ಮಂಗಳೂರು ನಗರದ ಮಿನಿವಿಧಾನಸೌಧಕ್ಕೆ ಕರೆದೊಯ್ದಿದ್ದಾನೆ.
ಈ ವೇಳೆ ವ್ಯಕ್ತಿಯು ರೈಲ್ವೆ ಸಾಫ್ಟವೇರ್ ಅಪ್‌ಲೋಡ್ ಮಾಡಲು 1,500 ರೂ. ಪಡೆದು, ಸಾಫ್ಟ್‌ವೇರ್ ಹಾಕಲು ಮೊಬೈಲ್‌ನ್ನು ತೆಗೆದುಕೊಂಡಿದ್ದಾನೆ. ಆನಂತರ ಸ್ಟೇಟ್ ಬ್ಯಾಂಕ್ ಬಳಿಯ ಸೈಬರ್‌ಗೆ ಹೋಗಲು ಆಟೊರಿಕ್ಷಾದಲ್ಲಿ ಕರೆದೊಯ್ದಿದ್ದಾನೆ. ಈ ವೇಳೆ ಅಶ್ರಫ್ ತನ್ನ ಮೊಬೈಲ್‌ನ್ನು ಆ ವ್ಯಕ್ತಿಯ ಕೈಯಿಂದ ಪಡೆದು ತನ್ನ ಬ್ಯಾಗ್‌ನಲ್ಲಿಟ್ಟು ಪರಿಚಯದ ಸ್ಟೇಟ್ ಬ್ಯಾಂಕ್ ಬಳಿಯ ಜ್ಯೂಸ್ ಅಂಗಡಿಯಲ್ಲಿಟ್ಟಿದ್ದಾನೆ.
ಆನಂತರ ವ್ಯಕ್ತಿಯು ಕೆಆರ್‌ಸಿಎಲ್ ಅಪ್ಲಿಕೇಶನ್ ತಯಾರಾಗಿದ್ದು, ಅದನ್ನು ತೆಗೆದುಕೊಂಡು ಬರುವಂತೆ ಅಶ್ರಫ್‌ಗೆ ತಿಳಿಸಿದ್ದಾನೆ. ಆಗ ನಗರದ ಕೆಆರ್‌ಸಿಎಲ್ ಕಚೇರಿಗೆ ತೆರಳಿ ವಾಪಾಸಾದಾಗ ವ್ಯಕ್ತಿಯು ಜ್ಯೂಸ್ ಅಂಗಡಿಯಲ್ಲಿದ್ದ ತನ್ನ ಬ್ಯಾಗ್‌ನಲ್ಲಿದ್ದ ಮೊಬೈಲ್, 4,500 ರೂ. ನಗದನ್ನು ಕಳವುಗೈದಿದ್ದಾನೆ ಎಂದು ದೂರಲಾಗಿದೆ.
ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







