ಮೈಸೂರು: ಕಮಿಷನ್ ವಿಚಾರಕ್ಕಾಗಿ ಮಹಿಳೆಯ ಕೊಲೆ ಪ್ರಕರಣ; ಆರೋಪಿ ಬಂಧನ
ಮೈಸೂರು,ಜೂ.28: ನಿವೇಶನ ಖರೀದಿ ಕಮಿಷನ್ ವಿಚಾರವಾಗಿ ಮಹಿಳೆಯೊಬ್ಬರನ್ನು ಹತ್ಯೆಗೈದು ಪರಾರಿಯಾಗಿದ್ದ ರಿಯಲ್ ಎಸ್ಟೇಟ್ ಏಜೆಂಟ್ ಓರ್ವನನ್ನು ನಜರ ಬಾದ್ ಪೊಲೀಸರು ಬಂಧಿಸಿದ್ದಾರೆ.
ನಗರದ ಸಿದ್ದಾರ್ಥ ಬಡಾವಣೆ ನಿವಾಸಿ ಹಾಗೂ ಬೆಂಗಳೂರಿನ ಬಿಬಿಎಂಪಿಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಉಮೇಶ ಅವರ ಪತ್ನಿ ಮಹಾಲಕ್ಷ್ಮಿ(54) ಅವರೇ ಹತ್ಯೆಗೀಡಾದವರು. ಕೆ.ಆರ್.ನಗರ ಮೂಲದ ಕೀರ್ತಿರಾಜ್ ಎಂಬಾತನೇ ಕೊಲೆ ಅರೋಪಿ.
ಮಹಾಲಕ್ಷ್ಮಿ ಅವರು ಕಳೆದ ಮೇ ತಿಂಗಳಿನಲ್ಲಿ ಮನೆಯಿಂದ ಹೊರ ಹೋದವರು ವಾಪಸಾಗಿರಲಿಲ್ಲ. ಈ ಸಂಬಂಧ ಕುಟುಂಬದವರು, ನಜರಬಾದ್ ಪೊಲೀಸರ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರು ದೂರವಾಣಿ ಕರೆಗಳ ಆಧಾರದ ಮೇಲೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾಲಕ್ಷ್ಮಿ ಅವರು ನಿವೇಶನ ಖರೀದಿಗಾಗಿ ಹುಡುಕಾಟ ನಡೆಸಿದ್ದರು. ಆಗ ಕೀರ್ತಿರಾಜ್ ತಾನು ರಿಯಲ್ ಎಸ್ಟೇಟ್ ಏಜೆನ್ಸಿ ನಡೆಸುತ್ತಿರುವುದಾಗಿ ಹೇಳಿಕೊಂಡು ಪರಿಚಯ ಮಾಡಿಕೊಂಡು, ನಗರದ ಹಲವೆಡೆ ನಿವೇಶನಗಳನ್ನೂ ತೋರಿಸಿದ್ದ ಎನ್ನಲಾಗಿದೆ. ನಂತರ ಸಿದ್ದಲಿಂಗಪುರದ ಬಳಿ ಇರುವ ನಿವೇಶನ ತೋರಿಸಲು ಮಹಾಲಕ್ಷ್ಮಿ ಅವರನ್ನು ಕರೆದೊಯ್ದ ಕೀರ್ತಿರಾಜ್, ಕಮಿಷನ್ ವಿಚಾರ ಮಾತನಾಡಿದ್ದಾನೆ. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಸಿಟ್ಟಿಗೆದ್ದ ಆತ ಮಹಾಲಕ್ಷ್ಮಿ ಅವರ ಕಪಾಲಕ್ಕೆ ಹೊಡೆದಿದ್ದರಿಂದ ಅವರು ಕುಸಿದುಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಂತರ ಮಹಾಲಕ್ಷ್ಮಿ ಅವರ ದೇಹವನ್ನು ಸಮೀಪವೇ ಇದ್ದ ಹಳ್ಳಕ್ಕೆ ತಳ್ಳಿ ಮಣ್ಣು ಮುಚ್ಚಿದ್ದಾನೆ ಎಂದು ಹೇಳಲಾಗಿದೆ. ನಂತರ ಮಹಾಲಕ್ಷ್ಮಿ ಅವರು ಮನೆಗೆ ವಾಪಸಾಗದಿದ್ದರಿಂದ ಅವರ ಕುಟುಂಬದವರು ನಾಪತ್ತೆ ದೂರು ದಾಖಲಿಸಿದ್ದರು.
ಮೊಬೈಲ್ ಕರೆಯಿಂದ ಪ್ರಕರಣ ಪತ್ತೆ: ಮಹಾಲಕ್ಷ್ಮಿ ಅವರ ಮೊಬೈಲ್ ಫೋನ್ ಪರಿಶೀಲಿಸಿದ ಪೊಲೀಸರು, ಅವರು ಕರೆ ಮಾಡಿರುವುದು, ಸ್ವೀಕರಿಸಿದ ಕರೆಗಳನ್ನು ಆಧರಿಸಿ ತನಿಖೆ ನಡೆಸಿದಾಗ ಕೀರ್ತಿರಾಜ್ ಮೇಲೆ ಅನುಮಾನ ಬಂದಿದೆ. ಕೂಡಲೆ ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಮಹಾಲಕ್ಷ್ಮಿ ಅವರನ್ನು ಕೊಲೆ ಮಾಡಿ ಹೂತು ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮಹಾಲಕ್ಷ್ಮಿ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಆರೋಪಿ ಕೀರ್ತಿರಾಜ್‍ನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.