ದನದ ವ್ಯಾಪಾರಿ ಹುಸೇನಬ್ಬ ಸಾವಿನ ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಜು.11ಕ್ಕೆ ವಿಸ್ತರಣೆ
ಉಡುಪಿ, ಜೂ. 28: ಮಂಗಳೂರು ಜೋಕಟ್ಟೆಯ ದನದ ವ್ಯಾಪಾರಿ ಹುಸೇನಬ್ಬ(62) ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಹಿರಿಯಡ್ಕ ಎಸ್ಸೈ ಡಿ.ಎನ್.ಕುಮಾರ್ ಸೇರಿದಂತೆ ಈಗ ಬಂಧನದಲ್ಲಿರುವ 9 ಮಂದಿ ಆರೋಪಿಗಳ ನ್ಯಾಯಾಂಗ ಬಂಧನವನ್ನು ಉಡುಪಿ ನ್ಯಾಯಾಲಯ ಜು.11ರವರೆಗೆ ವಿಸ್ತರಿಸಿ ಗುರುವಾರ ಆದೇಶ ನೀಡಿದೆ.
ಆರೋಪಿಗಳಿಗೆ ವಿಧಿಸಿದ ನ್ಯಾಯಾಂಗ ಬಂಧನ ಇಂದು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಉಡುಪಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯದ ನ್ಯಾಯಾಧೀಶ ವಿ.ಎಸ್. ಪಂಡಿತ್ ಅವರು ಇಂದು ಮತ್ತೆ ಎರಡು ವಾರಗಳ ಕಾಲ ಮುಂದುವರಿಸಿದರು.
ಕಾರವಾರ ಜೈಲಿನಲ್ಲಿರುವ ಎಂಟು ಮಂದಿ ಹಾಗೂ ಮಂಗಳೂರು ಜೈಲಿನಲ್ಲಿರುವ ದೀಪಕ್ ಹೆಗ್ಡೆ ಅವರನ್ನು ಪೊಲೀಸ್ ಸಿಬ್ಬಂದಿಗಳ ಕೊರತೆಯ ಹಿನ್ನೆಲೆಯಲ್ಲಿ ಇಂದು ಉಡುಪಿಗೆ ಕರೆತಂದಿರಲಿಲ್ಲ. ಪ್ರಕರಣದಲ್ಲಿ ಬಂಧಿತರಾಗಿದ್ದ ಒಟ್ಟು 11 ಮಂದಿ ಆರೋಪಿಗಳಲ್ಲಿ ಇಬ್ಬರಿಗೆ- ಹಿರಿಯಡ್ಕ ಪೊಲೀಸ್ ಹೆಡ್‌ಕಾನ್‌ಸ್ಟೇಬಲ್ ಮೋಹನ್ ಕೋತ್ವಾಲ್ ಹಾಗೂ ಬಜರಂಗ ದಳ ನಾಯಕ ಪ್ರಸಾದ್ ಕೊಂಡಾಡಿ- ನ್ಯಾಯಾಲಯ ಕಳೆದ ವಾರ ಜಾಮೀನು ನೀಡಿ ಉಳಿದವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಹಿರಿಯಡ್ಕ ಠಾಣೆಯ ಎಸ್ಸೈ ಡಿ.ಎನ್.ಕುಮಾರ್, ಪೊಲೀಸ್ ಸಿಬ್ಬಂದಿ ಗೋಪಾಲ, ವಿಎಚ್‌ಪಿ ಮುಖಂಡ ಸುರೇಶ್ ಮೆಂಡನ್, ಬಜರಂಗದಳ ಕಾರ್ಯಕರ್ತ ರಾದ ಉಮೇಶ್ ಶೆಟ್ಟಿ, ರತನ್ ಪೂಜಾರಿ, ಚೇತನ್ ಆಚಾರ್ಯ, ಶೈಲೇಶ್ ಶೆಟ್ಟಿ, ಗಣೇಶ್ ನಾಯ್ಕ ಹಾಗೂ ಪೆರ್ಡೂರಿನ ದೀಪಕ್ ಹೆಗ್ಡೆ ಈಗ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಾಗಿದ್ದಾರೆ.







