ಸ್ಟರ್ಲೈಟ್ ಶಾಶ್ವತ ಮುಚ್ಚುಗಡೆ: ತಮಿಳುನಾಡು ಸಚಿವ

ಚೆನ್ನೈ, ಜೂ. 28: ಪರಿಸರ ಮಾಲಿನ್ಯದ ಹಿನ್ನೆಲೆಯಲ್ಲಿ ಹಿಂಸಾಚಾರದ ಪ್ರತಿಭಟನೆ ಕೇಂದ್ರವಾಗಿದ್ದ ತೂತುಕುಡಿಯಲ್ಲಿರುವ ಸ್ಟರ್ಲೈಟ್ ಘಟಕವನ್ನು ಖಾಯಂ ಆಗಿ ಮುಚ್ಚಲಾಗಿದೆ ಎಂದು ತಮಿಳುನಾಡಿನ ಸಚಿವ ಡಿ. ಜಯ ಕುಮಾರ್ ಹೇಳಿದ್ದಾರೆ.
ಈ ಕುರಿತು ಯೋಗ ಗುರು ಬಾಬಾ ರಾಮ್‌ದೇವ್ ಹಾಗೂ ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ಅವರ ನಿಲುವುಗಳಿಗೆ ಮನ್ನಣೆ ನೀಡಲಾರೆವು ಎಂದು ಅವರು ಹೇಳಿದ್ದಾರೆ. ‘‘ಸ್ಟರ್ಲೈಟ್ ಘಟಕ ಮರು ಆರಂಭವಾಗುವುದಿಲ್ಲ. ನಾವು ದೃಢ ನಿಲುವು ತೆಗೆದುಕೊಂಡಿದ್ದೇವೆ. ನಾವು ರಾಮ್ ದೇವ್ ಹಾಗೂ ಸದ್ಗುರು ಅವರ ನಿಲುವಿಗೆ ಮನ್ನಣೆ ನೀಡಲಾರೆವು. ಸ್ಟರ್ಲೈಟ್ ಘಟಕವನ್ನು ಶಾಶ್ವತವಾಗಿ ಮುಚ್ಚಲಾಗಿದೆ’’ ಎಂದು ತಮಿಳುನಾಡು ಮೀನುಗಾರಿಕಾ ಸಚಿವ ಜಯಕುಮಾರ್ ಹೇಳಿದ್ದಾರೆ.
ಮೇ 22 ಹಾಗೂ 23ರಂದು ನಡೆದ ಪ್ರತಿಭಟನೆ ಸಂದರ್ಭ ಪೊಲೀಸರ ಗೋಲಿಬಾರ್‌ಗೆ 13 ಮಂದಿ ಸಾವನ್ನಪ್ಪಿದ ಬಳಿಕ ಸ್ಟರ್ಲೈಟ್ ತಾಮ್ರ ಘಟಕವನ್ನು ಮುಚ್ಚಲಾಗಿತ್ತು. ತೂತುಕುಡಿಯಲ್ಲಿ ಸ್ಟರ್ಲೈಟ್ ಘಟಕವನ್ನು ಮರು ಆರಂಭಿಸಲು ಬಾಬಾ ರಾಮ್ ದೇವ್ ಹಾಗೂ ಜಗ್ಗಿ ವಾಸುದೇವ್ ಅವರು ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಚಿವರು ಈ ಪ್ರತಿಕ್ರಿಯೆ ನೀಡಿದ್ದಾರೆ.





