ಪಾಕಿಸ್ತಾನವು ಭಯೋತ್ಪಾದಕ ಗುಂಪುಗಳ ಸ್ವರ್ಗವಾಗುವುದನ್ನು ಸಹಿಸುವುದಿಲ್ಲ:ಅಮೆರಿಕ
ಹೊಸದಿಲ್ಲಿ,ಜೂ.28: ಪಾಕಿಸ್ತಾನವು ಭಯೋತ್ಪಾದಕ ಗುಂಪುಗಳ ಸ್ವರ್ಗವಾಗುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ ಮತ್ತು ಅಮೆರಿಕವು ಈಗಾಗಲೇ ಪಾಕ್ ಸರಕಾರಕ್ಕೆ ಈ ಸಂದೇಶವನ್ನು ರವಾನಿಸಿದೆ ಎಂದು ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿರುವ ನಿಕ್ಕಿ ಹ್ಯಾಲೆ ಅವರು ಗುರುವಾರ ಇಲ್ಲಿ ಹೇಳಿದರು.
ಅಬ್ಸರ್ವರ್ಸ್ ರೀಸರ್ಚ್ ಫೌಂಡೇಷನ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ನೀಡುತ್ತಿದ್ದ ಅವರು,ಭಯೋತ್ಪಾದಕರಿಗೆ ಆಶ್ರಯ ನೀಡುವವರತ್ತ ನಾವು ಕುರುಡರಾಗಿರುವಂತಿಲ್ಲ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನಕ್ಕೆ ತಿಳಿಸಿದ್ದೇವೆ ಎಂದರು.
ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಅಮೆರಿಕ ಜಾಗತಿಕ ನಾಯಕತ್ವ ವಹಿಸಬೇಕು ಎಂದ ಅವರು,ಇದು ನಮ್ಮಿಂದ ಸಾಧ್ಯವಿದೆ ಮತ್ತು ನಾವು ಇನ್ನೂ ಹೆಚ್ಚಿನದನ್ನು ಮಾಡಬೇಕಿದೆ ಎಂದರು.
ಹಲವಾರು ವಿಷಯಗಳ ಕುರಿತು ಮಾತನಾಡಿದ ಅವರು,ಧಾರ್ಮಿಕ ಸ್ವಾತಂತ್ರವು ಅತ್ಯಂತ ಮುಖ್ಯವಾಗಿದೆ ಮತ್ತು ನಮ್ಮಂತಹ ರಾಷ್ಟ್ರಗಳು ಸಹಿಷ್ಣುತೆಯಿಂದ ಮಾತ್ರ ಒಂದಾಗಿರಲು ಸಾಧ್ಯ ಎಂದರು.
ಚೀನಾ ಕುರಿತಂತೆ ಅವರು, ಅದೊಂದು ಪ್ರಮುಖ ರಾಷ್ಟ್ರವಾಗಿದೆ. ಆದರೆ ಚೀನಾ ಪ್ರಜಾಸತ್ತಾತ್ಮಕ ವೌಲ್ಯಗಳನ್ನು ನಂಬುವುದಿಲ್ಲವಾದ್ದರಿಂದ ಪ್ರದೇಶದಲ್ಲಿ ಅದರ ವಿಸ್ತರಣೆಯು ಅಮೆರಿಕ ಮತ್ತು ಇತರ ಹಲವಾರು ರಾಷ್ಟ್ರಗಳಿಗೆ ಕಳವಳದ ವಿಷಯವಾಗಿದೆ ಎಂದು ಹೇಳಿದರು.
ಇತ್ತೀಚಿಗೆ ಸಿಂಗಾಪುರದಲ್ಲಿ ಶಾಂಗ್ರಿ-ಲಾ ಮಾತುಕತೆಗಳ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಹಡಗು ಸಂಚಾರ ಸ್ವಾತಂತ್ರ ಮತ್ತು ಸ್ಥಿರತೆಯನ್ನು ಖಚಿತಪಡಿಸುವಂತೆ ನೀಡಿದ್ದ ಹೇಳಿಕೆಯನ್ನು ಪ್ರಸ್ತಾಪಿಸಿದ ಹ್ಯಾಲೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ ಈ ದೃಷ್ಟಿಕೋನದಲ್ಲಿ ನಂಬಿಕೆ ಹೊಂದಿದ್ದಾರೆ ಎಂದರು.
ಪರಮಾಣು ಪೂರೈಕೆದಾರರ ಗುಂಪಿಗೆ ಭಾರತದ ಸೇರ್ಪಡೆಯನ್ನು ಅಮೆರಿಕವು ಬೆಂಬಲಿಸುತ್ತದೆ ಎಂದು ಅವರು ತಿಳಿಸಿದರು.







