ಮಹಾಪುರುಷರ ಜಯಂತಿಗಳು ಒಂದು ಜಾತಿಗೆ ಸೀಮಿತವಾಗಬಾರದು: ಶೋಭಾ ಕರಂದ್ಲಾಜೆ

ಕೊಪ್ಪ, ಜೂ.28: ಸಮಾಜ ಸೇವೆಗೆ, ನಾಡಿನ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ವ್ಯಕ್ತಿಗಳನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುತ್ತಿರುವುದು ಸರಿಯಲ್ಲ. ಅವರು ಜಾತಿಯನ್ನು ಮೀರಿ ಇಡೀ ಸಮಾಜದ, ರಾಷ್ಟ್ರದ ಏಳಿಗೆಗೆ ಶ್ರಮಿಸಿದವರು. ಸರ್ಕಾರದ ಅಡಿಯಲ್ಲಿ ಆಚರಿಸುತ್ತಿರುವ ಮಹಾತ್ಮರ ಜಯಂತಿಗಳು ಕಾಟಾಚಾರದ ಕಾರ್ಯಕ್ರಮಗಳಾಗುತ್ತಿವೆ. ಇಂತಹ ಮಹತ್ವದ ಕಾರ್ಯಕ್ರಮಗಳು ಸಾಂಕೇತಿಕವಾಗದೇ ಎಲ್ಲರ ಸಹಭಾಗಿತ್ವದಲ್ಲಿ ನಡೆಯುವಂತೆ ಚಿಂತನೆ ನಡೆಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಬಾಳಗಡಿಯ ಒಕ್ಕಲಿಗರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 'ಕೆಂಪೇಗೌಡರು ಕನ್ನಡ ನಾಡಿನ ಹೆಮ್ಮೆಯ ಪುತ್ರ. ದೂರದೃಷ್ಠಿಯನ್ನು ಇಟ್ಟುಕೊಂಡು ಯೋಜನಾಬದ್ಧವಾಗಿ ಬೆಂಗಳೂರು ನಗರವನ್ನು ನಿರ್ಮಾಣ ಮಾಡಿ ತಮ್ಮ ಕೆಲಸ ಕಾರ್ಯದ ಮೂಲಕವೇ ನಮಗೆ ಮಾರ್ಗದರ್ಶನ ನೀಡಿದ್ದಾರೆ. ಸುಸಜ್ಜಿತವಾದ ರಸ್ತೆ, ಚರಂಡಿ ನಿರ್ಮಿಸಿದ್ದಲ್ಲದೇ ಬರಗಾಲ ಉಂಟಾಗದಂತೆ ಅಂತರ್ಜಲ ಹೆಚ್ಚಿಸಲು ನೂರಾರು ಕೆರೆಕಟ್ಟೆಗಳನ್ನು, ಸಾಂಸ್ಕ್ರತಿಕ ಕೇಂದ್ರ, ದೇವಸ್ಥಾನಗಳನ್ನು ನಿರ್ಮಿಸಿದ್ದರು. ಆದರೆ ಇಂದಿನ ಸರ್ಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿತನದಿಂದ ಹೆಚ್ಚಿನ ಕೆರೆಕಟ್ಟೆಗಳು ಮುಚ್ಚಿಹೋಗಿವೆ. ಕೆಲವು ನಿವೇಶನಗಳಾಗಿ ಪರಿವರ್ತನೆ ಹೊಂದಿವೆ. ಇರುವ ಕೆರೆಕಟ್ಟೆಗಳಲ್ಲಿ ಕೆಲವು ಕಾರ್ಖಾನೆಗಳ ವಿಷ ತುಂಬಿಕೊಂಡಿದೆ. ಸರಿಯಾದ ಚರಂಡಿ, ಮೋರಿಯ ವ್ಯವಸ್ಥೆ ಇಲ್ಲದೇ ಒಂದೇ ಮಳೆಗೆ ನಗರದ ಬಹುತೇಕ ಪ್ರದೇಶ ಮುಳುಗುವ ಭೀತಿ ಉಂಟಾಗಿದೆ. ಬಸವಣ್ಣ, ನಾರಾಯಣ ಗುರು, ಕೆಂಪೇಗೌಡರಂತ ಮಹಾನ್ ವ್ಯಕ್ತಿಗಳನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬಾರದು. ಅವರ ಸಾಧನೆಗಳನ್ನು ಇಡೀ ಸಮಾಜ ಗುರುತಿಸುವಂತಾಗಬೇಕು. ವಿಶೇಷವಾಗಿ ಇಂದಿನ ಯುವಪೀಳಿಗೆಗೆ ಮಹಾನ್ ಸಾಧಕರ ಪರಿಚಯವಾಗಬೇಕು. ಅವರ ಆದರ್ಶಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳುವಂತಾಗಬೇಕು. ಈ ದಿಶೆಯಲ್ಲಿ ಎಲ್ಲರೂ ಚಿಂತನೆ ನಡೆಸೋಣ ಎಂದರು.
ತಾಲೂಕು ಪಂಚಾಯತ್ ಅಧ್ಯಕ್ಷೆ ಜೆ.ಎಸ್. ಲಲಿತಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಸ್.ಎನ್. ರಾಮಸ್ವಾಮಿ, ದಿವ್ಯ ದಿನೇಶ್, ತಾಲೂಕು ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಂ.ಕೆ. ಕಿರಣ್, ಸದಸ್ಯರಾದ ಭವಾನಿ ಹೆಬ್ಬಾರ್, ಹೆಚ್.ಎಸ್. ಪ್ರವೀಣ್ ಕುಮಾರ್, ಒಕ್ಕಲಿಗರ ಸಂಘದ ಉಪಾಧ್ಯಕ್ಷ ಎ.ಆರ್. ಜಯಪ್ರಕಾಶ್, ಸದಸ್ಯರಾದ ಯು.ಎಸ್. ಶಿವಪ್ಪ, ಯುವ ಒಕ್ಕಲಿಗರ ಸಂಘದ ಅಧ್ಯಕ್ಷ ಪ್ರಥ್ವಿರಾಜ್ ಕೌರಿ, ಸಾಹಿತಿ ನೆಂಪೆ ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು. ಮಾಜಿ ಸಚಿವ ಡಿ.ಎನ್. ಜೀವರಾಜ್ ಸಭಿಕರ ಸಾಲಿನಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ಕಂದಾಯ, ಶಿಶು ಕಲ್ಯಾಣ, ತೋಟಗಾರಿಕೆ, ಉಪನೊಂದಣಿ, ಪಶುವೈದ್ಯ, ಶಿಕ್ಷಣ, ಆರೋಗ್ಯ ಮತ್ತು ತಾ.ಪಂ. ಹೊರತುಪಡಿಸಿ ಉಳಿದ ಇಲಾಖೆಗಳಿಂದ ಜನರು ಗೈರಾಗಿದ್ದಾರು. ಹೆಚ್ಚಿನ ಜನಪ್ರತಿನಿಧಿಗಳು, ಸಾರ್ವಜನಿಕರು ಕಾರ್ಯಕ್ರಮದಿಂದ ದೂರ ಉಳಿದಿದ್ದು, ಸಭಾಂಗಣದ ಬಹುತೇಕ ಕುರ್ಚಿಗಳು ಖಾಲಿಯಿದ್ದವು.







