ಪಡಿತರ ಚೀಟಿ ಪ್ರಕ್ರಿಯೆ ಸ್ಥಗಿತ; ಅಧಿಕಾರಿಗಳಿಂದ ಮಾಹಿತಿ
ಉಡುಪಿ ಶಾಸಕರಿಂದ ಪ್ರಗತಿ ಪರಿಶೀಲನಾ ಸಭೆ
ಉಡುಪಿ, ಜೂ.28: ವಿಧಾನಸಬಾ ಚುನಾವಣೆ ನೀತಿಸಂಹಿತೆ ಜಾರಿಯಾದ ಬಳಿಕ ಸ್ಥಗಿತಗೊಂಡಿದ್ದ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ, ಪಡಿತರ ಚೀಟಿಗಳ ತಿದ್ದುಪಡಿ ಮೊದಲಾದ ಪ್ರಕ್ರಿಯೆಗಳು ಇನ್ನೂ ಪುನರಾರಂಭಗೊಂಡಿಲ್ಲ ಎಂದು ಸಂಬಂಧಿತ ಅಧಿಕಾರಿಗಳು ತಿಳಿಸಿದ್ದಾರೆ.
ಉಡುಪಿ ಶಾಸಕ ಕೆ.ರಘುಪತಿ ಭಟ್, ತಾಪಂ ಸಭಾಂಗಣದಲ್ಲಿ ಇಂದು ನಡೆಸಿದ ಉಡುಪಿ ವಿಧಾನಸಬಾ ಕ್ಷೇತ್ರ ವ್ಯಾಪ್ತಿಯ ಗ್ರಾಪಂ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳು, ಕಂದಾಯ ಅಧಿಕಾರಿಗಳ ಸಭೆಯಲ್ಲಿ ಅಧಿಕಾರಿಗಳು ಈ ಮಾಹಿತಿ ನೀಡಿದರು. ಪಡಿತರ ಚೀಟಿ ಬಗ್ಗೆ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾಗಿದೆ ಎಂದರು. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸುತ್ತೇನೆ ಎಂದು ಶಾಸಕರು ನುಡಿದರು.
ಕಳೆದ ಸಾಲಿನಲ್ಲಿ ಮಂಜೂರಾಗಿದ್ದ ವಸತಿಗಳ ಪೈಕಿ 1,560 ಹಂಚಿಕೆಗೆ ಬಾಕಿ ಇವೆ. ಕೆಲವು ಗ್ರಾಪಂಗಳಲ್ಲಿ ನಿವೇಶನ ಹಂಚಿಕೆ ಪ್ರಕ್ರಿಯೆ ನಡೆದ ಅನಂತರ ಇವೆಲ್ಲವೂ ಫಲಾನುಭವಿಗಳಿಗೆ ದೊರೆಯಲಿದೆ. ಈಗ ತಾಂತ್ರಿಕ ಸಮಸ್ಯೆ ಎದುರಾಗಿದೆ. ಈ ಬಗ್ಗೆ ರಾಜೀವ್‌ಗಾಂಧಿ ವಸತಿ ನಿಗಮವೇ ಕ್ರಮ ಕೈಗೊಳ್ಳ ಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಮನೆ ನಿವೇಶನಗಳನ್ನು ಸಿದ್ಧಪಡಿಸಿ ಕೊಡುವಾಗ ಅವುಗಳು ವ್ಯವಸ್ಥಿತ ವಾಗಿರುವಂತೆ ಎಚ್ಚರ ವಹಿಸಬೇಕು. ರಸ್ತೆಗಾಗಿ 24 ಅಡಿ ಜಾಗವನ್ನು ಮೀಸಲಿಡಬೇಕು. ಅತಿಕ್ರಮಣಕ್ಕೆ ಅವಕಾಶ ನೀಡಬಾರದು. ಇಲ್ಲವಾದರೆ ಮುಂದೆ ಬಾರೀ ಸಮಸ್ಯೆಗಳು ಎದುರಾಗುತ್ತವೆ. ಚರಂಡಿಯಂತಹ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಬೇಕು ಎಂದು ಶಾಸಕರು ಸಲಹೆ ನೀಡಿದರು.
ಕನಿಷ್ಠ ವೇತನದಿಂದ ಸಂಬಳ ಕಡಿತ: ಗ್ರಾಪಂ ನೌಕರರಿಗೆ ಸರಕಾರವೇ ಕನಿಷ್ಠ ವೇತನ ನಿಗದಿ ಮಾಡಿ ಅದನ್ನು ಸರಕಾರವೇ ಕೊಡುವುದಾಗಿ ತೀರ್ಮಾನಿಸಿದೆ. ಆದರೆ ಈಗ ಇದರಿಂದ ಸಮಸ್ಯೆಯಾಗಿದೆ. ಈ ಹಿಂದೆ ಕೆಲವರಿಗೆ ಸರಕಾರ ಈಗ ನಿಗದಿ ಮಾಡಿರುವುದಕ್ಕಿಂತ ಹೆಚ್ಚು ಮೊತ್ತದ ವೇತನ ನೀಡಲಾಗುತ್ತಿತ್ತು. ಈಗ ಅದು ಸಾಧ್ಯವಾಗುತ್ತಿಲ್ಲ.ಅಲ್ಲದೇ ಗ್ರಾಪಂ ನೌಕರರಿಗೆ ಸರಕಾರದಿಂದ ವೇತನ ಬಂದಿಲ್ಲ ಎಂದು ಪಿಡಿಒಗಳು ದೂರಿದರು. ಇದನ್ನುಸರಕಾರದ ಗಮನಕ್ಕೆ ತರುವುದಾಗಿ ಶಾಸಕರು ಭರವಸೆ ನೀಡಿದರು.
ಉಡುಪಿಗೆ 500 ಮನೆ: ಕೇಂದ್ರ ಸರಕಾರ ಪ್ರಧಾನಮಂತ್ರಿ ಆವಾಜ್ ಯೋಜನೆಯನ್ನು ಶೀಘ್ರದಲ್ಲೇ ದೊಡ್ಡ ಮಟ್ಟದಲ್ಲಿ ಕಾರ್ಯಗತಗೊಳಿಸಲಿದೆ. ಇದಕ್ಕಾಗಿ ಈಗ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದಲೂ ವಸತಿ ರಹಿತರ ಪಟ್ಟಿಯನ್ನು ಕೇಳಿದೆ. ಹೀಗಾಗಿ ಅಧಿಕಾರಿಗಳು ಸಮರ್ಪಕವಾಗಿ ಸಮೀಕ್ಷೆ ನಡೆಸಿ ಗರಿಷ್ಠ ಸಂಖ್ಯೆಯ ವಸತಿರಹಿತರ ಪಟ್ಟಿಯನ್ನು ನೀಡಬೇಕು. ನಗರದ ಕೊಳಚೆಗೇರಿ ಗಳಿಗೆ ಮನೆ ನೀಡುವ ಯೋಜನೆಯಂತೆ ಉಡುಪಿಯ ಕೊಡಂಕೂರಿನ ಬಲರಾಮನಗರ, ಕೊಡವೂರಿನ ಪಾಳೆಕಟ್ಟೆ ಮತ್ತು ಇಂದಿರಾನಗರಕ್ಕೆ 500 ಮನೆಗಳು ಮಂಜೂರಾಗಿವೆ. ಈ ಮನೆಗಳಿಗೆ ತಲಾ 5 ಲಕ್ಷ ರೂ.ಗಳು ಕೇಂದ್ರ ಸರಕಾರದಿಂದ ದೊರೆಯಲಿವೆ ಎಂದು ಶಾಸಕ ರಘುಪತಿ ಟ್ ತಿಳಿಸಿದರು.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜೊತೆಯಾಗಿ ಕೆಲಸ ಮಾಡಬೇಕು. ತಮ್ಮ ಬಳಿಗೆ ಬರುವ ಸಾರ್ವಜನಿಕರ ಕೆಲಸಗಳನ್ನು ಹೇಗೆ ಮಾಡಿ ಕೊಡಬಹುದು ಎಂದು ಅಧಿಕಾರಿಗಳು ಯೋಚಿಸಬೇಕೇ ಹೊರತು ಅದಕ್ಕೆ ವಿರುದ್ಧವಾಗಿ ಅಲ್ಲ. ಒಂದು ವೇಳೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದರೆ ಆ ಬಗ್ಗೆ ತಿಳಿ ಹೇಳಿ ಎಂದು ರಘುಪತಿ ಭಟ್ ತಿಳಿಸಿರು.
ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷ ಭುಜಂಗ ಶೆಟ್ಟಿ, ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಬ್ರಹ್ಮಾವರ ತಹಶೀಲ್ದಾರ್ ಭಾರತಿ, ತಾಪಂ ಇಒ ಮೋಹನ್‌ರಾಜ್ ಉಪಸ್ಥಿತರಿದ್ದರು.







