ಗಾಂಜಾ ಮಾರಾಟಕ್ಕೆ ಯತ್ನ; ಆರೋಪಿ ಸೆರೆ
ಮಂಗಳೂರು, ಜೂ.28: ಯುವಕರಿಗೆ ಗಾಂಜಾ ಮಾರಾಟ ಮಾಡಲು ಒಯ್ಯುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಸೆರೆ ಹಿಡಿದು, ಆತನಿಂದ ಗಾಂಜಾ ವಶಪಡಿಸಿಕೊಂಡ ಘಟನೆ ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಮುಡಿಪು ನವಗ್ರಾಮದಲ್ಲಿ ಗುರುವಾರ ನಡೆದಿದೆ.
ಆರೋಪಿಯನ್ನು ಬಂಟ್ವಾಳ ತಾಲೂಕಿನ ಕೈರಂಗಳ ಗ್ರಾಮದ ಮುಡಿಪುವಿನ ಇಕ್ಬಾಲ್ ಎಂದು ಗುರುತಿಸಲಾಗಿದೆ. ಆತನಿಂದ 680 ಗ್ರಾಂ ಗಾಂಜಾ ಮತ್ತು ಸ್ಕೂಟರ್‌ನ್ನು ವಶಪಡಿಸಿಕೊಳ್ಳಲಾಗಿದೆ.
ಮುಡಿಪು ನವಗ್ರಾಮದಿಂದ ಸ್ಕೂಟರ್‌ನಲ್ಲಿ ಬರುತ್ತಿದ್ದ ಇಕ್ಬಾಲ್ ಪೊಲೀಸರ ವಾಹನ ಕಂಡ ತಕ್ಷಣ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಬೆನ್ನಟ್ಟಿದ ಪೊಲೀಸರು ಆತನನ್ನು ಹಿಡಿದು ತಪಾಸಣೆ ಮಾಡಿದಾಗ ಗಾಂಜಾ ಇರುವುದು ಪತ್ತೆಯಾಗಿದೆ. ಆರೋಪಿಯನ್ನು ವಿಚಾರಿಸಿದಾಗ ಮೀಯಪದವಿನ ಅರ್ಷಾದ್ ಎಂಬಾತನಿಂದ ಗಾಂಜಾ ಖರೀದಿಸಿಕೊಂಡು ಯುವಕರಿಗೆ ಮಾರಾಟ ಮಾಡಲು ಕೊಂಡೊಯ್ಯುತ್ತಿರುವುದಾಗಿ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





