ಹಾಸನ: ಉರುಳಿಗೆ ಬಿದ್ದು ಚಿರತೆ ಸಾವು

ಹಾಸನ,ಜೂ.28: ಇತರೆ ಪ್ರಾಣಿಗಳ ಭೇಟಿಗಾಗಿ ಬೇಟೆಗಾರರು ಹಾಕಿದ್ದ ಉರುಳಿಗೆ ಚಿರತೆಯೊಂದು ಸಿಲುಕಿ ಒದ್ದಾಡಿ ಸಾವನ್ನಪ್ಪಿರುವ ಘಟನೆ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಸಕಲೇಶಪುರ ತಾಲೂಕಿನ ದೇವಾಲದ ಕೆರೆಯ ಅತ್ತಿಬೀಡು ಸಮೀಪ ರಸ್ತೆ ಬದಿಯಲ್ಲಿ ಬೇಟೆಗಾರರು ಹಾಕಿದ್ದ ಉರುಳಿಗೆ ನಾಲ್ಕು ವರ್ಷದ ಗಂಡು ಚಿರತೆ ಸಿಲುಕಿ ಸಾವನ್ನಪ್ಪಿದೆ. ಉರುಳಿಗೆ ಚಿರತೆ ಸಿಕ್ಕಿ ಹಾಕಿಕೊಂಡಿರುವುದನ್ನು ಗಮನಿಸಿದ ಸ್ಥಳೀಯರು ಬಿಡಿಸಲು ಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗದಿದ್ದರಿಂದ ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ಆದರೆ ಅಧಿಕಾರಿಗಳು ಸ್ಥಳಕ್ಕೆ ಬರುವಷ್ಟರಲ್ಲಿ ಚಿರತೆ ಸಾವನ್ನಪ್ಪಿದೆ.
ಸಾವನ್ನಪ್ಪಿರುವ ಚಿರತೆ ಸುಮಾರು ನಾಲ್ಕು ವರ್ಷದ ಗಂಡು ಚಿರತೆ ಎನ್ನಲಾಗಿದ್ದು, ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ಭಾಗದಲ್ಲಿ ಕಾಡಾನೆ ಸಮಸ್ಯೆ ಮತ್ತು ಚಿರತೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಭಯದ ವಾತಾವರಣದಲ್ಲಿ ಬದುಕಬೇಕಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜನತೆ ಒತ್ತಾಯಿಸಿದ್ದಾರೆ.





