ಹಾಸನ: ಕಲಾವಿದೆಯರ ಮೇಲಿನ ಅತ್ಯಾಚಾರ ಖಂಡಿಸಿ ಪ್ರತಿಭಟನೆ
ಹಾಸನ,ಜೂ.28: ಜಾರ್ಖಾಂಡ್‍ನ ಚೋಚಾಂಗ್ ಜಿಲ್ಲೆಯಲ್ಲಿ ಬೀದಿನಾಟಕ ಕಲಾವಿದೆಯರ ಮೇಲೆ ನಡೆಸಿದ ಅತ್ಯಾಚಾರವನ್ನು ಖಂಡಿಸಿ ರಾಜ್ಯ ಬೀದಿನಾಟಕ ಕಲಾತಂಡಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟು ಬಿ.ಎಂ. ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಪ್ರತಿಭಟನಾಕಾರರು, ಇತ್ತೀಚಿಗೆ ಜಾರ್ಖಾಂಡ್‍ನ ಚೋಚಾಂಗ್ ಜಿಲ್ಲೆಯಲ್ಲಿ ಬೀದಿನಾಟಕ ಕಲಾವಿದೆಯರ ಮೇಲೆ ನಡೆಸಿದ ಅತ್ಯಾಚಾರ ನೋವಿನ ಸಂಗತಿ. ಅದೇ ಜಿಲ್ಲೆಯ ಗ್ರಾಮವೊಂದರಲ್ಲಿ ಮಕ್ಕಳ ಕಳ್ಳ ಸಾಗಾಣಿಕೆ ಕುರಿತು ಬೀದಿನಾಟಕ ಪ್ರದರ್ಶಿಸುತ್ತಿದ್ದ 11 ಜನ ಕಲಾವಿದರಲ್ಲಿ 5 ಜನ ಮಹಿಳಾ ಕಲಾವಿದರನ್ನು ಅಪಹರಿಸಿ ಪಾತಾಳಗರಡಿ ಸಂಘಟನೆಯ ಕೆಲ ದುಷ್ಕರ್ಮಿಗಳು ಕಾಡಿಗೆ ಕರೆದೊಯ್ದು ಅತ್ಯಾಚಾರವೆಸಗಿ ತಮ್ಮ ಕ್ರೂರತನ ಪ್ರದರ್ಶಿಸಿದ್ದಾರೆ. ಅವರನ್ನು ತಕ್ಷಣ ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ನಂತರ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಬೀದಿನಾಟಕ ಕಲಾವಿದರಿಗೆ ನ್ಯಾಯ ಮತ್ತು ಪರಿಹಾರ ದೊರಕಿಸಿಕೊಡದಿದ್ದರೆ ನಮ್ಮ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಬೀದಿನಾಟಕ ಕಲಾತಂಡಗಳ ಒಕ್ಕೂಟದ ಅಧ್ಯಕ್ಷ ಗ್ಯಾರಂಟಿ ರಾಮಣ್ಣ, ಜಿಲ್ಲಾಧ್ಯಕ್ಷ ಬಿ.ಟಿ. ಮಾನವ, ರಾಜ್ಯ ಸಮಿತಿ ಸದಸ್ಯ ಲೋಕೇಶ್, ಕಾರ್ಯದರ್ಶಿ ಪಿ. ಚನ್ನರಾಯಿ, ರೈತ ಸಂಘದ ಮೀಸೆ ಮಂಜಣ್ಣ, ರಾಜಣ್ಣ, ಜಿಲ್ಲಾಧ್ಯಕ್ಷ ಬಾಬು, ಸಣ್ಣಸ್ವಾಮಿ, ಮರೀಗೌಡ ಇತರರು ಇದ್ದರು.