ವಿಶೇಷ ಚೇತನರಿಗೆ ಬೇಕಿರುವುದು ಅನುಕಂಪವಲ್ಲ, ನೆರವು: ಸಂಸದ ಜಿ.ಎಂ ಸಿದ್ದೇಶ್ವರ

ದಾವಣಗೆರೆ,ಜೂ.28: ವಿಶೇಷಚೇತನರಿಗೆ ಬೇಕಿರುವುದು ಅನುಕಂಪವಲ್ಲ, ಬದಲಾಗಿ ನೆರವು. ಅವರು ಎಲ್ಲರಂತೆ ಸಮರ್ಥರಾಗಿದ್ದು, ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಂಸದ ಜಿ.ಎಂ.ಸಿದ್ದೇಶ್ವರ ಸಲಹೆ ನೀಡಿದರು.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಭಾರತ ಸರ್ಕಾರ, ಜಿಲ್ಲಾಡಳಿತ ಹಾಗೂ ಜಿ.ಪಂ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಅಲಿಮ್ಕೊ ಸಂಸ್ಥೆ ಆಶ್ರಯದಲ್ಲಿ ಕೇಂದ್ರ ಸರ್ಕಾರದ ವಿಶೇಷ ಅಡಿಪ್ (ಎಡಿಐಪಿ ) ಯೋಜನೆಯಡಿ ನಗರದ ರೇಣುಕಾ ಮಂದಿರದಲ್ಲಿ ಏರ್ಪಡಿಸಿದ್ದ ‘ವಿಕಲಚೇತನರಿಗೆ ಉಚಿತವಾಗಿ ಸಾಧನ ಸಲಕರಣೆಗಳ ಸಮರ್ಪಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. 'ಕೇಂದ್ರ ಸರ್ಕಾರದ ವಿಶೇಷ ಅಡಿಪ್ ಯೋಜನೆಯಡಿ ಜಿಲ್ಲೆಯಲ್ಲಿ ಇದು ಮೂರನೇ ಬಾರಿ ವಿಶೇಷಚೇತನರಿಗೆ ಉಚಿತವಾಗಿ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. 2016-17 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 784 ವಿಕಲಚೇತನರಿಗೆ ಸುಮಾರು 48 ಲಕ್ಷ ಮೌಲ್ಯದ ಸಾಧನ ಸಲಕರಣೆಗಳನ್ನು ವಿತರಿಸಲಾಗಿತ್ತು. ಪ್ರಸ್ತುತ 2017-18 ನೇ ಸಾಲಿನಲ್ಲಿ 974 ಫಲಾನುಭವಿಗಳಿಗೆ ರೂ.66 ಲಕ್ಷದ ವಿವಿಧ ಸಲಕರಣೆಗಳನ್ನು ವಿತರಿಸಲಾಗುತ್ತಿದೆ. ಸೌಲಭ್ಯ ಪಡೆಯದವರು ಮುಂದಿನ ದಿನಗಳಲ್ಲಿ ನೋಂದಣಿ ಮಾಡಿಸಿಕೊಂಡು ಪಡೆದುಕೊಳ್ಳಬಹುದು ಎಂದರು.
ವಿಕಲಚೇತನರಿಗೆ ಸೌಲಭ್ಯ ಒದಗಿಸುವ ಕೆಲಸ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಈ ನಿಟ್ಟಿನಲ್ಲಿ ಬುದ್ದಿಮಾಂದ್ಯರ ಚಿಕಿತ್ಸೆ ಮತ್ತು ಪುನರ್ವಸತಿಗಾಗಿ ನಗರದ ದೇವರಾಜ ಅರಸು ಬಡಾವಣೆಯಲ್ಲಿ ಎನ್‍ಐಹೆಚ್‍ಎಂ ಕಾರ್ಯಕ್ರಮದಡಿ ಸಿಆರ್‍ಸಿ(ಕಾಂಪೊಸಿಟ್ ರೀಜನಲ್ ಸೆಂಟರ್)ತೆರೆಯಲಾಗಿದ್ದು, ಇಲ್ಲಿ ಪ್ರತಿದಿನ 20 ರಿಂದ 25 ಜನ ತಪಾಸಣೆಗೊಳಗಾಗುತ್ತಿದ್ದಾರೆ. ಈ ಸಿಆರ್‍ಸಿ ಕೇಂದ್ರವನ್ನು ಸುಸಜ್ಜಿತವಾಗಿ ಸ್ಥಾಪಿಸಲು ಆನಗೋಡಿನಲ್ಲಿ ಜಿಲ್ಲಾಡಳಿತ ವತಿಯಿಂದ 2 ಎಕರೆ ಜಾಗ ನೀಡಲಾಗಿದೆ. ಚಿಕಿತ್ಸೆ ಹಾಗೂ ತರಬೇತಿಗಾಗಿ ಕೇಂದ್ರ ಸರ್ಕಾರ ನೆರವು ನೀಡುತ್ತದೆ. ಕರ್ನಾಟಕ ಮತ್ತು ಗೋವಾ ರಾಜ್ಯಗಳಿಂದ ಸೇರಿ ದಾವಣಗೆರೆಯಲ್ಲಿ ಒಂದೇ ಇಂತಹ ಕೇಂದ್ರವಿದ್ದು, ಈ ಕೇಂದ್ರ ಜಿಲ್ಲೆಗೆ ತರಲು ಸಾಕಷ್ಟು ಶ್ರಮಿಸಿದ್ದು, 20 ರಿಂದ 30 ಕೋಟಿ ವೆಚ್ಚದಲ್ಲಿ ಇಲ್ಲಿ ಆಸ್ಪತ್ರೆ ಮತ್ತು ತರಬೇತಿ ಕೇಂದ್ರ ತೆರೆಯಲು ಕೇಂದ್ರ ಒಪ್ಪಿಗೆ ಸೂಚಿಸಿದೆ. ಪ್ರಸ್ತುತ ಜಮೀನಿನ ಸುತ್ತ ಇನ್ನಷ್ಟು ಜಾಗ ಸಿಕ್ಕರೆ ಇನ್ನೂ ಉತ್ತಮವಾಗಿ ಕೇಂದ್ರವನ್ನು ನಿರ್ಮಿಸಬಹುದು. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.
ಶಾಸಕ ಎಸ್.ಎ.ರವೀಂದ್ರನಾಥ ಮಾತನಾಡಿ, ವಿಕಲಚೇತನರನ್ನು ಹೆಚ್ಚು ಓಡಾಡಿಸದೇ, ತೊಂದರೆಯಾಗದಂತೆ ಯೋಜನೆ-ಸೌಲಭ್ಯಗಳನ್ನು ಅವರಿಗೆ ಒದಗಿಸುವ ಕೆಲಸವಾಗಬೇಕೆಂದು ಒತ್ತಾಯಿಸಿದರು. ಅಂಗವೈಕಲ್ಯ ಬಂದ ಮೇಲೆ ವಿವಿಧ ಸಾಧನ-ಸಲಕರಣೆ ನೀಡುವ ಬದಲಾಗಿ, ಅಂಗವೈಕಲ್ಯವೇ ಬಾರದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸಂಶೋಧನೆಗಳು ಆಗಬೇಕು. ನಿಯಮಗಳನ್ನು ಆದಷ್ಟು ಸರಾಗಗೊಳಿಸಿಕೊಂಡು ವಿಕಲಚೇತನರನ್ನು ಹೆಚ್ಚು ಓಡಾಡಿಸದೇ ಸೌಲಭ್ಯಗಳನ್ನು ಆದಷ್ಟು ಬೇಗ ಒದಗಿಸಬೇಕು. ಅಂಗವಿಕಲರ ಪೋಷಕರು ಇಂತಹ ಮಕ್ಕಳು ಜನಿಸಿದರಲ್ಲ ಎಂದು ಮನಸ್ಸಿಗೆ ನೋವು ಮಾಡಿಕೊಳ್ಳದೇ ಮಕ್ಕಳನ್ನು ನೋಡಿಕೊಳ್ಳಬೇಕೆಂದು ಹೇಳಿದರು.
ಜಿಲ್ಲಾಧಿಕಾರಿ ಡಿ.ಎಸ್ ರಮೇಶ್ ಮಾತನಾಡಿ, ಇವರು ವಿಕಲಚೇತನರಲ್ಲ ಬದಲಾಗಿ ವಿಶೇಷ ಚೇತನರು. ಈ ಬಾರಿಯ ವಿಧಾನಸಭಾ ಚುನವಾಣೆಯಲ್ಲಿ ಸಾಮಾನ್ಯ ವ್ಯಕ್ತಿಗಳು ಶೇ.75 ಮತದಾನ ಮಾಡಿದರೆ, ವಿಶೇಷಚೇತನರು ಶೇ. 96 ಮತದಾನ ಮಾಡಿ ದಾಖಲೆ ಸೃಷ್ಟಿಸಿದ್ದಾರೆ. ಇಂತಹ ವಿಶೇಷಚೇತನರು ಎಲ್ಲರಂತೆ ಸಂತೋಷದಿಂದಿರಲು ಅನುವಾಗುವಂತೆ ಕೇಂದ್ರ ಸರ್ಕಾರ ಇಂತಹ ಉತ್ತಮ ಯೋಜನೆ ಜಾರಿಗೆ ತಂದಿದ್ದು, ಇಂತಹ ಸೌಲಭ್ಯಗಳ ಉಪಯೋಗ ಪಡೆದು ನಾನೂ ಒಬ್ಬ ಜವಾಬ್ದಾರಿ ಪ್ರಜೆ ಎಂದು ಪ್ರತಿ ವಿಶೇಷಚೇತನರಿಗೂ ಅನ್ನಿಸುವಂತಾಗಬೇಕೆಂದು ಆಶಿಸಿದರು.
ಜಿ.ಪಂ ಅಧ್ಯಕ್ಷೆ ಮಂಜುಳಾ ಟಿ ವಿ ರಾಜು, ಶಾಸಕರಾದ ಎಸ್ ವಿ ರಾಮಚಂದ್ರಪ್ಪ, ಪ್ರೊ. ಲಿಂಗಣ್ಣ, ಜಿ.ಪಂ ಸದಸ್ಯರಾದ ಶೈಲಜಾ ಬಸವರಾಜ್, ಕೆ.ಹೆಚ್ ಓಬಳೇಶ್, ಅಲಿಮ್ಕೋ ಸಂಸ್ಥೆಯ ವ್ಯವಸ್ಥಾಪಕ ಅನುಪಮ್ ಪ್ರಕಾಶ್, ಪಾಲಿಕೆ ಸದಸ್ಯ ಕುಮಾರ್, ಜಿಲ್ಲಾ ಅಂಗವಿಕಲರಕಲ್ಯಾಣಾಧಿಕಾರಿ ಶಶಿಧರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ ಹೆಚ್ ವಿಜಯಕುಮಾರ್, ಅಲಿಮ್ಕೋ ಸಂಸ್ಥೆಯ ಪದಾಧಿಕಾರಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.
ದೈಹಿಕ ವಿಕಲಚೇತನರಿಗೆ 11 ಬ್ಯಾಟರಿ ಚಾಲಿತ ಟ್ರೈಸೈಕಲ್, 159 ಟ್ರೈಸಕಲ್, 165 ವೀಲ್‍ಚೇರ್, 216 ಊರುಗೋಲು, 22 ವಾಕಿಂಗ್ ಸ್ಟಿಕ್, 10 ರೋಲೇಟರ್, 34 ಸಿ.ಪಿ.ಚೇರ್(ಮೆದುಳುವಾತ ವಿಕಲಚೇತನರಿಗೆ), ಕ್ಯಾಲಿಪರ್ಸ್, ಕೃತಕ ಕಾಲುಗಳು, 515 ಶ್ರವಣದೋಷ ವಿಕಲಚೇತನರಿಗೆ ಶ್ರವಣ ಸಾಧನ, ದೃಷ್ಟಿದೋಷ ವಿಕಲಚೇತನರಿಗೆ 44 ಬಿಳಿಕೋಲು, ಬ್ರೈಲ್ ಸ್ಲೇಟ್ & ಬ್ರೈಲ್ ಕಿಟ್‍ಗಳು ಹಾಗೂ ಬುದ್ದಿಮಾಂದ್ಯ ವಿಕಲಚೇತನರಿಗೆ 94 ಟಿಎಲ್‍ಎಂ ಕಿಟ್‍ಗಳನ್ನು ವಿತರಿಸಲಾಯಿತು. ಜಿಲ್ಲೆಯ ಒಟ್ಟು 974 ಫಲಾನುಭವಿಗಳಿಗೆ ರೂ. 65.74 ಲಕ್ಷ ಮೌಲ್ಯದ ವಿವಿಧ ರೀತಿಯ 4558 ಸಾಧನ-ಸಲಕರಣೆಗಳನ್ನು ವಿತರಿಸಲಾಯಿತು.







