ಚುನಾವಣೆಯ 48 ಗಂಟೆಗಳ ಮೊದಲು ರಾಜಕೀಯ ಜಾಹೀರಾತು ನಿಲ್ಲಿಸುವಂತೆ ಫೇಸ್‌ಬುಕ್‌ಗೆ ಮನವಿ

ಹೊಸದಿಲ್ಲಿ, ಜೂ.28: ರಾಜಕೀಯ ಜಾಹೀರಾತುಗಳನ್ನು ಪ್ರಕಟಿಸುವುದನ್ನು ಚುನಾವಣೆಯ 48 ಗಂಟೆಗಳ ಮೊದಲು ನಿಲ್ಲಿಸುವಂತೆ ಭಾರತೀಯ ಚುನಾವಣಾ ಆಯೋಗ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ಗೆ ಮನವಿ ಮಾಡಿದೆ.
1951ರ ಜನರ ಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 126ರ ನಿಬಂಧನೆಗಳನ್ನು ಅಧ್ಯಯನ ಮಾಡಲು ಚುನಾವಣಾ ಆಯೋಗ ರಚಿಸಿದ್ದ ಸಮಿತಿಯು ಜೂನ್ 4ರಂದು ನಡೆಸಿದ ಸಭೆಯಲ್ಲಿ, ಯಾವುದೇ ರೀತಿಯ ಚುನಾವಣಾ ಕಾನೂನಿನ ಉಲ್ಲಂಘನೆಯ ಬಗ್ಗೆ ದೂರು ನೀಡಲು ಜಾಲತಾಣದಲ್ಲಿ ಅವಕಾಶವನ್ನು ಒದಗಿಸುವುದಾಗಿ ಫೇಸ್‌ಬುಕ್ ಪ್ರತಿನಿಧಿ ಭರವಸೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಜನರ ಪ್ರಾತಿನಿಧ್ಯ ಕಾಯ್ದೆಯ 126ನೇ ವಿಧಿಯು, ಚುನಾವಣೆ ನಡೆಯುವುದಕ್ಕೂ 48 ಗಂಟೆಗಳ ಮೊದಲು ದೂರದರ್ಶನ ಅಥವಾ ಇದೇ ಮಾದರಿಯ ಇತರ ಮಾಧ್ಯಮಗಳಲ್ಲಿ ರಾಜಕೀಯ ವಿಷಯಗಳನ್ನು ಪ್ರಕಟಿಸುವುದನ್ನು ನಿಷೇಧಿಸುತ್ತದೆ. ಫೇಸ್‌ಬುಕ್‌ನಲ್ಲಿ ಹಾಕಲಾಗುವ ವಿಷಯಗಳ ಬಗ್ಗೆ ದೂರನ್ನು ನೀಡಬಹುದು ಮತ್ತು ಈ ದೂರುಗಳನ್ನು ಜಾಗತಿಕ ಸಮುದಾಯದ ದರ್ಜೆಯಂತೆಯೇ ನಿಬಾಯಿಸಲಾಗುವುದು ಎಂದು ಫೇಸ್‌ಬುಕ್ ಪ್ರತಿನಿಧಿ ತಿಳಿಸಿದ್ದಾರೆ. ಯಾವುದೇ ವಿಷಯಗಳು ಸಮುದಾಯದ ನಿಯಮವನ್ನು ಉಲ್ಲಂಘಿಸುವಂತಿದ್ದರೆ ಅಂಥ ವಿಷಯಗಳನ್ನು ತೆಗೆದುಹಾಕಲಾಗುವುದು ಎಂದವರು ತಿಳಿಸಿದ್ದಾರೆ. ಯಾವುದೇ ರೀತಿಯ ಉಲ್ಲಂಘನೆ ಸಾಬೀತಾದಲ್ಲಿ ಫೇಸ್‌ಬುಕ್ ಮೊದಲಿಗೆ ಸಂಬಂಧಿತ ಯೂಸರ್‌ಗೆ ಮಾಹಿತಿ ನೀಡಿ ಹಂಚಲಾದ ವಿಷಯವನ್ನು ತೆಗೆದು ಹಾಕುವುದು. ಹೀಗೆ ತೆಗೆದ ವಿಷಯವನ್ನು ಫೇಸ್‌ಬುಕ್‌ನ ಪಾರದರ್ಶಕ ಪುಟದಲ್ಲಿ ಹಾಕಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.





