ಮಂಡ್ಯ: ವ್ಯಕ್ತಿಯ ಕೊಲೆ ಯತ್ನ ಪ್ರಕರಣ; ಪತ್ನಿ ಪರಾರಿ, ಪ್ರಿಯಕರ ಸೇರಿ ಮೂವರ ಬಂಧನ

ಮಂಡ್ಯ, ಜೂ.28: ಪತ್ನಿಯ ಸಲಹೆಯಂತೆ ಪತಿಯ ಕೊಲೆಗೆ ಯತ್ನಿಸಿದ್ದ ಪ್ರಿಯಕರ ಸೇರಿ ಮೂವರನ್ನು ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಾಂಡವಪುರ ತಾಲೂಕು ಅಗಟಹಳ್ಳಿಯ ಅನಿಲ್‍ಕುಮಾರ್, ಮಂಡ್ಯ ತಾಲೂಕಿನ ಚಂದಗಾಲು ಗ್ರಾಮದ ಚನ್ನೇಗೌಡ ಹಾಗೂ ಕೋಣನಹಳ್ಳಿಯ ಕುಪ್ಪುಸ್ವಾಮಿ ಬಂಧಿತರು. ರಮೇಶನ ಪತ್ನಿ ಪರಾರಿಯಾಗಿದ್ದಾಳೆ.
ಶಿವಮೊಗ್ಗದ ರಮೇಶ್ ಎಂಬುವರು ತಾಲೂಕಿನ ಯಲಿಯೂರಿನ ತನ್ನ ಪತ್ನಿ ಮನೆಗೆ ಕಳೆದ 9ರ ತಡರಾತ್ರಿ ಹೋಗುತ್ತಿದ್ದಾಗ ಓರ್ವ ಬೈಕ್‍ನಲ್ಲಿ ಡ್ರಾಪ್ ಮಾಡುವುದಾಗಿ ಹೇಳಿ, ಸ್ವಲ್ಪ ದೂರ ಹೋದ ನಂತರ ಇತರ ವ್ಯಕ್ತಿಗಳೊಡನೆ ರಮೇಶನಿಗೆ ರಾಡಿನಿಂದ ತಲೆಮೇಲೆ ಹೊಡೆದು ಕೊಲೆಗೆ ಯತ್ನಿಸಿದ್ದರು. ಈ ವೇಳೆ ಅದೇ ಮಾರ್ಗವಾಗಿ ಬರುತ್ತಿದ್ದ ಬೈಕ್ ಕಂಡು ಆರೋಪಿಗಳು ಪರಾರಿಯಾಗಿದ್ದರು. ಬೈಕ್‍ನಲ್ಲಿ ಬಂದಾತ ರಮೇಶನ ಭಾವಮೈದ ನಿತಿನ್ ಗೌಡನಾಗಿದ್ದು, ಈತ ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದ.
ಈ ಸಂಬಂಧ ಎಸ್ಪಿ ಜಿ.ರಾಧಿಕಾ ಆರೋಪಿಗಳ ಪತ್ತೆಗಾಗಿ ಸಿಪಿಐ ಸುರೇಶ್ ಕುಮಾರ್, ಪಿಎಸ್ಸೈ ಅಜರುದ್ದೀನ್ ನೇತೃತ್ವದಲ್ಲಿ ತಂಡ ರಚಿಸಿದ್ದು, ಆರೋಪಿಗಳಾದ ಅನಿಲ್‍ಕುಮಾರ್, ಚನ್ನೇಗೌಡ ಅವರನ್ನು ಜೂ.27 ರಂದು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ರಮೇಶನ ಪತ್ನಿ ತನ್ನ ಪ್ರಿಯಕರ ಅನಿಲ್‍ಕುಮಾರ್ ನನ್ನು ವಿವಾಹ ಮಾಡಿಕೊಳ್ಳುವ ಸಲುವಾಗಿ ತನ್ನ ಗಂಡನನ್ನು ಕೊಲೆ ಮಾಡಲು ಅನಿಲ್‍ಕುಮಾರ್ ಗೆ ತಿಳಿಸಿದ್ದು, ಅದರಂತೆ ಚನ್ನೇಗೌಡ ಮತ್ತು ಕುಪ್ಪುಸ್ವಾಮಿ ಜತೆಗೂಡಿ ಅನಿಲ್‍ಕುಮಾರ್ ರಮೇಶ್‍ನ ಕೊಲೆಗೆ ಯತ್ನಿಸಿದ್ದ ಎಂದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಎಸ್ಪಿ ಜಿ.ರಾಧಿಕಾ ತಿಳಿಸಿದ್ದಾರೆ.







