ಪ್ರಧಾನಿಯನ್ನು ‘ಹುಲಿ’ಗೆ ಹೋಲಿಸಿದ ಅನಂತ್ ಕುಮಾರ್ ಹೆಗಡೆಗೆ ಮೊಯ್ಲಿ ತಿರುಗೇಟು ನೀಡಿದ್ದು ಹೀಗೆ...

ಹೊಸದಿಲ್ಲಿ, ಜೂ. 29: : ಪ್ರಧಾನಿ ನರೇಂದ್ರ ಮೋದಿ ಹುಲಿಯಂತೆ ಹಾಗೂ ವಿಪಕ್ಷಗಳು ಕಾಗೆ, ಕೋತಿ ಮತ್ತು ನರಿಗಳು ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ತಿರುಗೇಟು ನೀಡಿದ್ದಾರೆ. "ಹುಲಿಯು ಉಗ್ರವಾಗಿದೆ, ಅದನ್ನು ಮರಳಿ ಕಾಡಿಗೆ ಕಳುಹಿಸಬೇಕು" ಎಂದು ಮೊಯ್ಲಿ ಹೇಳಿದ್ದಾರೆ.
ಕೆಲ ಸಮಯದ ಹಿಂದೆ ವಿಪಕ್ಷಗಳನ್ನು ‘ಹಾವು, ನಾಯಿ, ಬೆಕ್ಕುಗಳಿಗೆ’ ಹೋಲಿಸಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಂದ ಸ್ಫೂರ್ತಿ ಪಡೆದಂತೆ ಅನಂತ್ ಕುಮಾರ್ ಹೆಗಡೆ ಮಂಗಳವಾರ ಹೇಳಿಕೆಯೊಂದನ್ನು ನೀಡಿ ‘‘ಒಂದು ಕಡೆಯಲ್ಲಿ ಕಾಗೆಗಳು, ಕೋತಿಗಳು, ನರಿಗಳು ಮತ್ತಿತರರು ಜತೆಗೂಡಿದ್ದಾರೆ. ಇನ್ನೊಂದು ಕಡೆ ನಮ್ಮಲ್ಲಿ ಹುಲಿಯಿದೆ. 2019ರಲ್ಲಿ ಹುಲಿಯನ್ನು ಆರಿಸಿ" ಎಂದಿದ್ದರು. ವಿಪಕ್ಷಗಳು ಕರ್ನಾಟಕದಲ್ಲಿ ಜತೆಗೂಡಿದ್ದಕ್ಕೆ ಮೂದಲಿಸಿ ‘ಹುಲಿ’ ಮೋದಿಯನ್ನು ಮುಂದಿನ ವರ್ಷದ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸುವಂತೆ ಅವರು ಈ ಮೂಲಕ ಕೋರಿದ್ದರು.
ಚಿನ್ನ, ಬೆಳ್ಳಿ ಕುರ್ಚಿಗಳ ಬಗ್ಗೆಯೂ ಹೆಗಡೆ ತಮ್ಮ ಭಾಷಣದಲ್ಲಿ ಹೇಳಿಕೊಂಡರು. ‘‘ನಾವೆಲ್ಲರೂ ಪ್ಲಾಸ್ಟಿಕ್ ಕುರ್ಚಿಗಳಲ್ಲಿ ಕುಳಿತುಕೊಂಡಿದ್ದೇವೆ ಅಲ್ಲವೇ ?’’ ಎಂದು ಅವರು ನೆರೆದಿದ್ದ ಸಭಿಕರನ್ನು ಅಣಕವಾಡಿದರು. ‘‘ಇದು ಕಾಂಗ್ರೆಸ್ ಆಡಳಿತದಿಂದಾಗಿ. ನಾವು 70 ವರ್ಷ ಆಳ್ವಿಕೆ ನಡೆಸಿದ್ದರೆ ನೀವೆಲ್ಲರೂ ಬೆಳ್ಳಿಯ ಕುರ್ಚಿಗಳಲ್ಲಿ ಕುಳಿತುಕೊಂಡಿರುತ್ತಿದ್ದೀರಿ" ಎಂದೂ ಅವರು ಹೇಳಿಕೊಂಡರು.





