ಗ್ರಾ.ಪಂ ಗೆ ಅಂಗನವಾಡಿ ಮೇಲುಸ್ತುವಾರಿ : ಸರಕಾರದ ಕ್ರಮವನ್ನು ವಿರೋಧಿಸಿ ಪ್ರತಿಭಟನೆ
ಮಡಿಕೇರಿ, ಜೂ.29: ಅಂಗನವಾಡಿಗಳ ಮೇಲುಸ್ತುವಾರಿಯನ್ನು ಗ್ರಾಮ ಪಂಚಾಯತ್‍ಗಳಿಗೆ ವಹಿಸುವ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಕೊಡಗು ಜಿಲ್ಲಾ ಘಟಕದ ಸದಸ್ಯರು ಶುಕ್ರವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗಾಂಧಿ ಮೈದಾನದಿಂದ ಮೆರವಣಿಗೆಯಲ್ಲಿ ತೆರಳಿದ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಗರದ ಕೋಟೆ ಆವರಣದಲ್ಲಿ ಜಮಾವಣೆಗೊಂಡು ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿ ಸಿಇಒ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಲಕ್ಷ್ಮಿ ಜಯಮ್ಮ ಅವರು, ರಾಜ್ಯದ ಯಾವುದೇ ಜಿಲ್ಲೆಗಳಲ್ಲಿ ಇಲ್ಲದ ಆದೇಶವನ್ನು ಕೊಡಗು ಜಿಲ್ಲೆಯಲ್ಲಿ ಹೊರಡಿಸಲಾಗಿದ್ದು, ಇದನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಅಂಗನವಾಡಿಗಳನ್ನು ಖಾಸಗೀಕರಣ ಮಾಡುವ ನೆಪದಲ್ಲಿ ರಾಜ್ಯ ಸರಕಾರ ಶೇ.10ರಷ್ಟು ಅಂಗನವಾಡಿಗಳ ಜವಾಬ್ದಾರಿಯನ್ನು ಪಂಚಾಯತ್ ರಾಜ್‍ಗೆ ವಹಿಸುವುದಾಗಿ 2013-14ನೇ ಸಾಲಿನಲ್ಲಿ ಆದೇಶ ಹೊರಡಿಸಿತ್ತು. ಆದರೆ ಈ ಸಂದರ್ಭ ರಾಜ್ಯಾದ್ಯಂತ ನಡೆದ ಹೋರಾಟದಿಂದ ಅದನ್ನು ಹಿಂಪಡೆಯಲಾಯಿತು. ಆದರೆ ಇದೀಗ ಕೊಡಗು ಜಿಲ್ಲೆಯಲ್ಲಿ ಅಂಗನವಾಡಿಗಳನ್ನು ಪಂಚಾಯಿತಿಗಳ ಮೇಲುಸ್ತುವಾರಿಗೆ ವಹಿಸುವ ಆದೇಶವನ್ನು ಹೊರಡಿಸಲಾಗಿದ್ದು, ಇದನ್ನು ಇಡೀ ರಾಜ್ಯದ ಆಂಗನವಾಡಿ ನೌಕರರು ವಿರೋಧಿಸುವುದಾಗಿ ತಿಳಿಸಿದರು. ಇಂದು ಕೊಡಗು ಜಿಲ್ಲೆಯಲ್ಲಿ ಹೊರಡಿಸಿರುವ ಆದೇಶ ಮುಂದಿನ ದಿನಗಳಲ್ಲಿ ಇತರ ಜಿಲ್ಲೆಗಳಲ್ಲೂ ಜಾರಿಯಾಗುವ ಆತಂಕವಿದೆ. ಹಾಗಾದಲ್ಲಿ ಅಂಗನವಾಡಿ ನೌಕರರ ಸ್ಥಿತಿಗತಿಗಳು ಅತಂತ್ರವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು ಈ ಕೂಡಲೇ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಲಕ್ಷ್ಮಿಜಯಮ್ಮ ಆಗ್ರಹಿಸಿದರು.
ಇಲಾಖಾ ಸಿಬ್ಬಂದಿಗಳ ಕೊರತೆಯ ನೆಪವೊಡ್ಡಿ ಈ ಆದೇಶ ಹೊರಡಿಸಲಾಗಿದೆ ಎನ್ನಲಾಗಿದ್ದು, ಸಿಬ್ಬಂದಿ ಕೊರೆ ಕೊಡಗು ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಇಡೀ ರಾಜ್ಯದಲ್ಲಿ ಸಿಬ್ಬಂದಿಗಳ ಕೊರತೆ ಇದ್ದು, ಬೇರೆ ಯಾವುದೇ ಜಿಲ್ಲೆಗಳಲ್ಲಿ ಈ ರೀತಿಯ ಆದೇಶ ಹೊರಡಿಸಿಲ್ಲ. ಅಂಗನವಾಡಿಗಳಿಗೆ ಗ್ರಾ.ಪಂ.ಗಳ ಸಹಕಾರ ಬೇಕು ಆದರೆ ಮೇಲುಸ್ತುವಾರಿ ಬೇಡ ಎಂದು ಅವರು ಪ್ರತಿಪಾದಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷೆ ಚೇಂದಿರ ಕಾವೇರಮ್ಮ ಅವರು, ವೀರಾಜಪೇಟೆ ತಾಲೂಕಿನಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಹುದ್ದೆ ಖಾಲಿ ಇದ್ದು, ಓರ್ವ ಪ್ರಭಾರ ಅಧಿಕಾರಿಯನ್ನಾದರೂ ನಿಯೋಜಿಸುವಂತೆ ತಾಲೂಕು ಹಾಗೂ ಜಿಲ್ಲಾ ಸಂಘದ ಪ್ರಮುಖರು ಹಲವಾರು ಬಾರಿ ಮನವಿ ಮಾಡಿದ್ದಾರೆ. 2014-15ರ ಸರಕಾರಿ ಆದೇಶದ ಪ್ರಕಾರ ಮೇಲ್ವಿಚಾರಕಿಯರಿಗೆ ಸಿಡಿಪಿಒ ಪ್ರಭಾರ ನೀಡಬಾರದೆಂದಿದ್ದರೂ, ಅದನ್ನು ಕಡೆಗಣಿಸಿ ಪ್ರಭಾರ ವಹಿಸಲಾಗಿದ್ದು, ತಕ್ಷಣ ಇದನ್ನು ಬದಲಾವಣೆ ಮಾಡಿ ಓರ್ವ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಸಿಪಿಐ(ಎಂ) ಮುಖಂಡ ಡಾ.ದುರ್ಗಾಪ್ರಸಾದ್ ಮತ್ತಿತರರು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಎಸ್.ಸುಮಿತ್ರಾ, ಉಪಾಧ್ಯಕ್ಷೆ ಎಂ.ಬಿ.ಜಮುನಾ, ಖಜಾಂಚಿ ಭಾಗೀರಥಿ, ಸೋಮವಾರಪೇಟೆ ತಾಲೂಕು ಅಧ್ಯಕ್ಷೆ ಎಸ್.ಎನ್.ಸಾವಿತ್ರಿ, ವೀರಾಜಪೇಟೆ ತಾಲೂಕು ಕ್ಷೇಮನಿಧಿ ಅಧ್ಯಕ್ಷೆ ಬಿ.ಕೆ.ಸರೋಜಾ, ಸಿಪಿಐ (ಎಂ) ಹಾಗೂ ಸಿಐಟಿಯು ಮುಖಂಡರಾದ ಪಿ.ಆರ್. ಭರತ್, ಹೆಚ್.ಬಿ.ರಮೇಶ್, ಎ.ಸಿ.ಸಾಬು, ಕುಟ್ಪಪ್ಪನ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.