ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದರೂ ಕಾಫಿ ಮಂಡಳಿ ನಿಷ್ಕ್ರಿಯ: ಭೋಜೇಗೌಡ ಆರೋಪ
ಚಿಕ್ಕಮಗಳೂರು, ಜೂ.29: ಕಾಫಿ ಧಾರಣೆ ಕುಸಿತದಿಂದ ಕಾಫಿತೋಟ ಮಾಲಕರು ಹಾಗೂ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದರೂ ಕಾಫಿ ಮಂಡಳಿ ನಿಷ್ಕ್ರೀಯವಾಗಿದೆ ಎಂದು ಕಾಫಿ ಬೆಳೆಗಾರರು ಮತ್ತು ಕರ್ನಾಟಕ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಜಿ.ಬಿ.ಭೋಜೇಗೌಡ ಆರೋಪಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಫಿ ಹಾಗೂ ಕಾಳುಮೆಣಸು ದರ ಕುಸಿತದಿಂದ ರೈತರು ಕೂಲಿ ಕಾರ್ಮಿಕರ ಸ್ಥಿತಿ ಚಿಂತಾಜನಕವಾಗಿದೆ. ಕಾಫಿ ಬೆಳೆಗಾರರನ್ನು ಕೇಳುವವರೆ ಇಲ್ಲದಂತಾಗಿದೆ. ಕೇಂದ್ರ, ರಾಜ್ಯ ಸರಕಾರಗಳ ಮತ್ತು ಕಾಫಿ ಮಂಡಳಿ ಕಾಫಿ ಉದ್ಯಮದ ಗಂಭೀರ ಸಮಸ್ಯೆಗೆ ಸ್ಪಂದಿಸದೇ ಕಣ್ಣುಮುಚ್ಚಿ ಕುಳಿತಿದೆ ಎಂದರು.
ಕಾಫಿ ಮಂಡಳಿಗೆ ಕಾಫಿ ಬೆಳೆಗಾರರನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಆದರೆ ಅವರು ನಾಮಕಾವಸ್ಥೆಗೆ ಮಾತ್ರ ಅಧ್ಯಕ್ಷರಾಗಿದ್ದಾರೆ. ಕ್ಷೇತ್ರದ ಸಂಸದರು ಜಿಲ್ಲೆಯ ಕಾಫಿ ಬೆಳೆಗಾರರ ಸಮಸ್ಯೆಗಳ ಬಗ್ಗೆ ಕೇಂದ್ರ ಸರಕಾರ ಗಮನ ಸೆಳೆಯುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ ಅವರು, ಕಾಫಿ ಬೆಳೆಗೆ ಕಾಂಡಕೊರಕ ಬಾಧೆ ತೀವ್ರವಾಗಿ ಹರಡುತ್ತಿದ್ದು, ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ರೋಗ ಹತೋಟಿ ಕ್ರಮಗಳ ಬಗ್ಗೆ ಕಾಫಿ ಮಂಡಳಿ ರೈತರಿಗೆ ಯಾವುದೇ ನೆರವು ನೀಡುತ್ತಿಲ್ಲ ಎಂದರು.
ಶ್ರೀಲಂಕಾ ಮತ್ತು ನೇಪಾಳದಿಂದ ಕಾಳು ಮೆಣಸು ಆಮದು ಮಾಡಿಕೊಳ್ಳುತ್ತಿರುವುದರಿಂದ ಸ್ಥಳೀಯ ಕಾಳು ಮೆಣಸು ಧಾರಣೆ ಕುಸಿತ ಕಂಡಿದೆ. ಕಾಫಿ ಬೆಳೆಗಾರರ ಸಮಸ್ಯೆ ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಈ ಹಿಂದೆ ನೀಡಲಾಗಿತ್ತು. ಆದರೆ ನಮ್ಮ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಗಿತ್ತು. ಅಂದು ನೀಡಿದ ಭರವಸೆಯನ್ನು ಕೇಂದ್ರ ಸರಕಾರ ಇದುವರೆಗೂ ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಲೆನಾಡು ಭಾಗದಲ್ಲಿ ಅರಣ್ಯ ಇಲಾಖೆ ರಸ್ತೆ ಬದಿಗಳಲ್ಲಿ ಮರ ನೆಡುತ್ತಿರುವುದರಿಂದ ಸಾರ್ವಜನಿಕರಿಗೆ, ಪಾದಚಾರಿಗಳಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಮಳೆಗಾಲದಲ್ಲಿ ಮರಗಳು ರಸ್ತೆಯ ಮೇಲೆ ಬಿಳುವುದರಿಂದ ಮತ್ತು ಮಳೆಯ ನೀರು ಸರಾಗವಾಗಿ ಹರಿಯದೆ. ರಸ್ತೆ ಮೇಲೆ ಹರಿಯುವುದರಿಂದ ರಸ್ತೆಗಳಿಗೂ ಹಾನಿಯಾಗುತ್ತಿದೆ ಎಂದರು.
ಅರಣ್ಯ ಇಲಾಖೆ ಗಿಡನೆಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಮಲೆನಾಡಿನ ಬದಲು ಬಯಲು ಭಾಗದಲ್ಲಿ ಮರಗಳನ್ನು ಬೆಳೆಸುವುದರಿಂದ ಅನುಕೂಲವಾಗಲಿದೆ. ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಗಮನಹರಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಆಲ್ದೂರು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಸುರೇಶ್ ಉಪಸ್ಥಿತರಿದ್ದರು.







