ನಿವೃತ್ತ ನ್ಯಾಯಾಧೀಶರಿಗೆ ಬೀಳ್ಕೊಡುಗೆ

ಚಿಕ್ಕಮಗಳೂರು, ಜೂ.29: ಕಾಯಕವೇ ಕೈಲಾಸ ಎಂದು ನಿಷ್ಠೆಯಿಂದ ಸೇವೆ ಸಲ್ಲಿಸಿರುವ 1ನೇ ಹೆಚ್ಚುವರಿ ನ್ಯಾಯಾಧೀಶರಾದ ಡಿ.ಕಂಬೇಗೌಡ ಅವರು ಸ್ನೇಹ ಜೀವಿಯಾಗಿದ್ದರು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪಿ.ಎನ್.ದೇಸಾಯಿ ಹೇಳಿದರು.
ನಗರದ ವಕೀಲರ ಸಂಘದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ 1ನೇ ಹೆಚ್ಚುವರಿ ನಿವೃತ್ತ ನ್ಯಾಯಾಧೀಶ ಡಿ.ಕಂಬೇಗೌಡ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಹೋದ್ಯೋಗಿಗಳೊಂದಿಗೆ ಅನ್ಯೂನ್ಯವಾಗಿದ್ದ ಕಂಬೇಗೌಡ, ರಾಜ್ಯದ ವಿವಿಧೆಡೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ಹೆಸರುಗಳಿಸದ್ದಾರೆ. 1999ರ ಅಕಾಡೆಮಿಕ್ ಬ್ಯಾಚ್‍ನವರು ಉಚ್ಚ ನ್ಯಾಯಾಲಯದಲ್ಲಿ ಉತ್ತಮ ಹುದ್ದೆ, ಅಕಾಡೆಮಿಕ್ ಡೈರೆಕ್ಟರ್, ರಿಜಿಸ್ಟಾರ್ ಆಗಿದ್ದಾರೆ, ಅದರಲ್ಲಿ ಡಿ.ಕಂಬೇಗೌಡ ಅವರು ಒಬ್ಬರು ಎಂದರು.
ನಾವು ಯಾವ ರೀತಿ ನಡೆದುಕೊಳ್ಳುತ್ತೇವೆ ಅದರ ಮೇಲೆ ನಮ್ಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ದೊರೆತಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡರೆ ದೇವರು ಒಳ್ಳೆಯದನ್ನು ಮಾಡುತ್ತಾರೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ನಿವರತ್ತ ನ್ಯಾಯಾಧೀಶ ಡಿ.ಕಂಬೇಗೌಡ ಮಾತನಾಡಿ, ಈ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿರುವುದು ತೃಪ್ತಿ ತಂದಿದೆ. ಕರ್ತವ್ಯದಲ್ಲಿ ಎಲ್ಲಾ ರೀತಿಯ ಅನುಭವ ಪಡೆದಿದ್ದೇನೆ. ಇಲ್ಲಿಯ ವಕೀಲರ, ಅಧಿಕಾರಿಗಳ ಪ್ರೋತ್ಸಾಹದಿಂದ ಸೇವೆ ಸಲ್ಲಿಸಲು ಸ್ಪೂರ್ತಿ ದೊರೆತಿದೆ. ಇಲ್ಲಿನ ವಕೀಲರ ಸಂಘಕ್ಕೆ ಉತ್ತಮ ಹೆಸರಿದೆ, ಇದು ಹೀಗೇ ಮುಂದುವರಿಯಲಿ ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಬಿ.ಟಿ.ದುಶ್ಯಂತ್ ಮಾತನಾಡಿ ಇಲ್ಲಿನ ನ್ಯಾಯಾಧೀಶರು ಮತ್ತು ಅಧಿಕಾರಿಗಳು ಉತ್ತಮ ಕಾರ್ಯನಿರ್ವಹಣೆಯಿಂದ ಹೆಸರು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಎಲ್ಲಾ ನ್ಯಾಯಾಧೀಶರು ಮತ್ತು ಹಿರಿಯ ನ್ಯಾಯವಾದಿಗಳು, ವಕೀಲರ ಸಂಘದ ಕಾರ್ಯದರ್ಶಿ ಸಿ.ಎಂ.ರಾಜೇಶ್, ಖಜಾಂಚಿ ಆರ್.ರಮೇಶ್, ಉಪಾಧ್ಯಕ್ಷ ಎಸ್.ಎಸ್.ವೆಂಕಟೇಶ್ ಮತ್ತಿತರು ಉಪಸ್ಥಿತರಿದ್ದರು.







