ಸಮ್ಮಿಶ್ರ ಸರಕಾರ 5ವರ್ಷ ಸುಭದ್ರ: ಸಿದ್ದರಾಮಯ್ಯ
"ನನ್ನ ವಿರುದ್ಧ ಮಾಧ್ಯಮಗಳಿಂದ ಅಪಪ್ರಚಾರ"
ಬೆಂಗಳೂರು, ಜೂ.29: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಮುಂದಿನ ಐದು ವರ್ಷಗಳ ಕಾಲ ಸುಭದ್ರವಾಗಿ ಆಡಳಿತ ನಡೆಸಲಿದೆ ಎಂದು ಸಮನ್ವಯ ಸಮಿತಿಯ ಅಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್ ಜತೆ ಸಮ್ಮಿಶ್ರ ಸರಕಾರ ರಚಿಸಿದ್ದು, ಇದನ್ನು ಒಪ್ಪಿಮುನ್ನಡೆದಿದ್ದೇವೆ. ಹೀಗಾಗಿ ಸಮ್ಮಿಶ್ರ ಸರಕಾರ ಐದು ವರ್ಷ ಸುಭದ್ರವಾಗಿರುವುದರಲ್ಲಿ ಯಾವುದೆ ಅನುಮಾನವಿಲ್ಲವೆಂದು ಖಚಿತ ಪಡಿಸಿದರು.
ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ನಾನು ಯಾರೊಂದಿಗೋ ಸಹಜವಾಗಿ ಮಾತನಾಡುತ್ತಿದ್ದರೆ, ಅದನ್ನು ಧ್ವನಿ ಮುದ್ರಿಸಿಕೊಂಡು ಪ್ರಸಾರ ಮಾಡುವುದು ನೈತಿಕತೆಯೇ. ನಾನು ಏನು ಹೇಳಿದ್ದೇನೆ, ಯಾವ ವಿಚಾರವಾಗಿ ಹೇಳಿದ್ದೇನೆ ಎನ್ನುವುದು ಮಾಧ್ಯಮಕ್ಕೆ ಗೊತ್ತಿಲ್ಲ. ಆದರೂ ನನ್ನ ವಿರುದ್ಧ ಅಪಪ್ರಚಾರ ಮಾಡಲಾಯಿತು ಎಂದು ಅವರು ವಿಷಾದಿಸಿದರು.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಕರಡು ಪ್ರತಿ ಬಗ್ಗೆ ವಿಸ್ಕೃತವಾಗಿ ಚರ್ಚೆ ಮಾಡಲಾಗಿದ್ದು, ಸಮನ್ವಯ ಸಮಿತಿ ಮುಂದೆ ಮಂಡಿಸಿ ಅಂತಿಮಗೊಳಿಸಲಾಗುವುದು. ಈ ಪ್ರತಿಯಲ್ಲಿರುವ ಅನೇಕ ವಿಷಯಗಳ ಬಗ್ಗೆ ಪರಿಶೀಲನೆ ಮಾಡಿದ್ದು, ಹಲವು ಸಲಹೆಗಳು ಸಭೆಯಲ್ಲಿ ವ್ಯಕ್ತವಾಗಿದೆ ಎಂದು ತಿಳಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿರುವ ಮೈತ್ರಿ ಸರಕಾರ ಯಾವುದೇ ಸಮುದಾಯದ ಬಗ್ಗೆ ಭೇದ-ಭಾವ ವ್ಯಕ್ತಪಡಿಸದೆ ಸರ್ವರನ್ನು ಒಂದೇ ದೃಷ್ಟಿಯಲ್ಲಿ ಮನಗಂಡು ಆಡಳಿತ ನಿರ್ವಹಣೆ ಮಾಡಲಿದೆ. ವಿರೋಧ ಪಕ್ಷಗಳ ಆರೋಪಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲವೆಂದು ತಿಳಿಸಿದರು.
ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ನಿರೀಕ್ಷೆಯಂತೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಬಜೆಟ್ ಮಂಡಿಸಲಿದ್ದಾರೆ. ಹೀಗಾಗಿ ಸಮ್ಮಿಶ್ರ ಸರಕಾರದ ಕನಿಷ್ಠ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಎರಡೂ ಪಕ್ಷಗಳ ನಾಯಕರಲ್ಲಿ ಯಾವುದೇ ಭಿನ್ನಮತ, ಗೊಂದಲಗಳಿಲ್ಲವೆಂದು ಸ್ಪಷ್ಪಪಡಿಸಿದರು.
ಸಿದ್ದರಾಮಯ್ಯ ನೇತೃತದ ಸರಕಾರ ನೀಡಿದ್ದ ಜನಪ್ರಿಯ ಯೋಜನೆಗಳನ್ನು ಈ ಬಾರಿಯ ಮುಂಗಡ ಪತ್ರದಲ್ಲೂ ಮುಂದುವರೆಸಲಾಗುತ್ತದೆ. ಈ ವಿಚಾರದಲ್ಲಿ ಸಂದೇಹಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಈ ವೇಳೆ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ಉಪಸ್ಥಿತರಿದ್ದರು.