ಮೂರು ದಿನ ಕಳೆದರೂ ಪತ್ತೆಯಾಗದ ರೈತ : ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ
ತುಂಗಾ ನದಿಯಲ್ಲಿ ಎನ್ಡಿಆರ್ ಎಫ್ ತಂಡದಿಂದ ತೀವ್ರ ಶೋಧ

ಒಳಚಿತ್ರದಲ್ಲಿ ಉಮೇಶ್
ಚಿಕ್ಕಮಗಳೂರು, ಜೂ.29: ತುಂಗಾ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆಂದು ಶಂಕಿಸಲಾಗಿರುವ ನೆಮ್ಮಾರು ಗ್ರಾಮದ ರೈತ ಉಮೇಶ್ ಅವರ ಪತ್ತೆಗಾಗಿ ಶುಕ್ರವಾರ ಬೆಳಗ್ಗೆ ಅಗ್ನಿಶಾಮಕದಳದ ಸದಸ್ಯರು ಹಾಗೂ ರಾಷ್ಟ್ರೀಯ ವಿಫತ್ತು ನಿರ್ವಹಣಾ ತಂಡ ಬೋಟ್ಗಳ ಸಹಾಯದಿಂದ ನದಿಯಲ್ಲಿ ತೀವ್ರನ ಶೋಧ ನಡೆಸಿದ್ದಾರೆ. ಆದರೆ ಸಂಜೆಯಾದರೂ ಉಮೇಶ್ ಅವರ ಬಗ್ಗೆ ಶೋಧ ತಂಡಕ್ಕೆ ಯಾವುದೇ ಸುಳಿವು ದೊರೆತಿಲ್ಲ ಎಂದು ತಿಳಿದು ಬಂದಿದೆ.
ಕಳೆದ ಬುಧವಾರ ರಾತ್ರಿ ಭಾರೀ ಮಳೆಯಿಂದಾಗಿ ಶೃಂಗೇರಿ ತಾಲೂಕಿನಾದ್ಯಂತ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿದಿತ್ತು. ಇದೇ ವೇಳೆ ನೆಮ್ಮಾರು ಗ್ರಾಮದ ರೈತ ಉಮೇಶ್ ಎಂಬವರು ತುಂಗಾ ನದಿ ಪಕ್ಕದಲ್ಲೇ ಇರುವ ಜಮೀನಿನ ಬಳಿ ಬಲೆ ಬಳಸಿ ಮೀನು ಹಿಡಿಯಲು ಹೋಗಿದ್ದರು. ಆದರೆ ಉಮೇಶ್ ಬೆಳಗಾದರೂ ಮನೆಗೆ ಹಿಂದಿರುಗದ ಹಿನ್ನೆಲೆಯಲ್ಲಿ ಉಮೇಶ್ ನದಿ ನೀರಿನಲ್ಲಿ ಕೊಚ್ಚಿ ಹೋಗಿರಬಹುದೆಂದು ಶಂಕಿಸಿ ಆತನ ಕುಟುಂಬದವರು ಶೃಂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡಿ ಶೃಂಗೇರಿ ಪೊಲೀಸರು ಹಾಗೂ ತಾಲೂಕು ದಂಡಾಧಿಕಾರಿಗಳ ನೇತೃತ್ವದ ತಂಡ ಅಗ್ನಿಶಾಮಕದಳದ ಸಿಬ್ಬಂದಿ ಗುರುವಾರದಿಂದ ನೆಮ್ಮಾರು ಗ್ರಾಮದಲ್ಲಿ ಹರಿಯುವ ತುಂಗಾ ನದಿಯಲ್ಲಿ ಉಮೇಶ್ ಪತ್ತೆಗಾಗಿ ತೀವ್ರ ಶೋಧ ನಡೆಸಿದ್ದರು. ಆದರೆ ಗುರುವಾರ ಉಮೇಶ್ ಬಗ್ಗೆ ಅಧಿಕಾರಿಗಳಿಗೆ, ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಜಿಲ್ಲಾಡಳಿತ ಶುಕ್ರವಾರ ನದಿಯಲ್ಲಿ ಎನ್ಡಿಆರ್ ಎಫ್ ತಂಡದಿಂದ ಶೋಧ ಕಾರ್ಯ ಮುಂದುವರಿಸಿಲು ತೀರ್ಮಾನಿಸಿತ್ತು. ಅದರಂತೆ ಶುಕ್ರವಾರ ಬೆಳಗ್ಗೆ ಸುಮಾರು 15ಕ್ಕೂ ಹೆಚ್ಚು ಎನ್ಡಿಆರ್ ಎಫ್ ತಂಡದ ಸದಸ್ಯರು 2 ನೋಟ್ಗಳ ಸಹಾಯದಿಂದ ನೆಮ್ಮಾರು ಗ್ರಾಮದಿಂದ ಶೃಂಗೇರಿವರೆಗೂ ತುಂಗಾ ನದಿಯಲ್ಲಿ ತೀವ್ರ ಹುಡುಕಾಟ ನಡೆಸಿದರು.
ಎನ್ಡಿಆರ್ ಎಫ್ ತಂಡದೊಂದಿಗೆ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಶೋಧ ಕಾರ್ಯದಲ್ಲಿ ಭಾಗವಹಿಸಿದ್ದರು. ಆದರೆ ಬೆಳಗ್ಗೆ ಆರಂಭವಾದ ಶೋಧ ಕಾರ್ಯ ಸಂಜೆವರೆಗೆ ನಡೆದರೂ ರೈತ ಉಮೇಶ್ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.







