ಸಮ್ಮಿಶ್ರ ಸರಕಾರದಲ್ಲಿ ಗೊಂದಲವಿಲ್ಲ, ಕುಮಾರಸ್ವಾಮಿಯೇ ಐದು ವರ್ಷ ಸಿಎಂ: ಸಚಿವ ಸಾ.ರಾ.ಮಹೇಶ್
ಮೈಸೂರು,ಜೂ.29: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಯಾವುದೇ ಗೊಂದಲವಿಲ್ಲ, ಕುಮಾರಸ್ವಾಮಿ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಾರೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ಆಯೋಜಿಸಿದ ಸಂವಾದದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರಕಾರದಲ್ಲಿ ಗೊಂದಲವಿದೆ ಎಂದು ಕೆಲವು ಮಾಧ್ಯಮಗಳು ದಿನವಿಡೀ ತೋರಿಸುತ್ತಿದ್ದಾರೆ, ಇದಕ್ಕೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.
ರಾಜ್ಯವನ್ನು ಪ್ರವಾಸೋದ್ಯಮ ಸ್ನೇಹಿಯನ್ನಾಗಿ ಮಾಡಲು ಬಾದಾಮಿ, ಶ್ರವಣಬೆಳಗೊಳ, ಮೈಸೂರು, ಐಹೊಳೆ, ಪಟ್ಟದಕಲ್ಲು, ಹಂಪಿ ಸೇರಿದಂತೆ ಸುಮಾರು 30 ಸ್ಥಳಗಳನ್ನು ಅಭಿವೃದ್ಧಿಪಡಿಸಲು ಕ್ರಿಯಾಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಸಾಂಸ್ಕೃತಿ ನಗರಿಯಾದ ಮೈಸೂರನ್ನು ಮತ್ತಷ್ಟು ಪ್ರವಾಸೋದ್ಯಮಿ ಸ್ನೇಹಿಯಾಗಿ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ನಗರಕ್ಕೆ ಬರುವ ಪ್ರವಾಸಿಗರು ಎರಡು ಮೂರು ದಿನಗಳ ಕಾಲ ಇಲ್ಲಿಯೇ ಉಳಿದು ಸುತ್ತಮುತ್ತಲ ಪ್ರೇಕ್ಷಣಿಯ ಸ್ಥಳಗಳನ್ನು ನೋಡಲು ಅನುಕೂಲ ಮಾಡಿಕೊಡಲಾಗುವುದು. ಇದಕ್ಕಾಗಿ ವಿದೇಶಿಗಳಲ್ಲಿರುವಂತೆ ತೆರೆದ ವಾಹನದ ಸೌಲಭ್ಯ, ಸರ್ಕ್ಯೂಟ್ ಟೂರಿಸಂ ಪ್ಯಾಕೇಜ್ ಪರಿಚಯಿಸಲಾಗುವುದು ಎಂದರು.
ವರ್ಷವಿಡಿ ವಸ್ತು ಪ್ರದರ್ಶನ :
ದಸರಾ ವಸ್ತು ಪ್ರದರ್ಶನ ಮೈದಾನವನ್ನು 143 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕ್ರಿಯಾ ಯೋಜನೆ ಸಿದ್ದಗೊಂಡಿದೆ, ಈ ಮೂಲಕ ವಸ್ತು ಪ್ರದರ್ಶನವನ್ನು ವರ್ಷವಿಡಿ ವೀಕ್ಷಿಸಲು ಅನುಕೂಲವಾಗಲಿದೆ, ಇದರಿಂದ ಪ್ರವಾಸೋದ್ಯಮವಲ್ಲದೇ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ನೆರವಾಗಲಿದೆ ಎಂದರು.
ಪ್ರವಾಸೋದ್ಯಮ ಲಾಭಿಗೆ ಕಡಿವಾಣ :
ಪ್ರವಾಸೋದ್ಯಮ ಹೆಸರಿನಲ್ಲಿ ಹಣ ಸುಲಿಗೆ ದಂಧೆ ನಡೆಯುತ್ತಿದೆ, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ಪ್ರವಾಸಿ ಮಾರ್ಗದರ್ಶಿಗಳು, ಹೋಟೆಲ್ ಉದ್ಯಮಿಗಳು ಸೇರಿದಂತೆ ಇತರರ ಸಭೆ ಕರೆ ಪ್ರವಾಸಿಗರೊಂದಿಗೆ ಸೌಜನ್ಯದಿಂದ ವರ್ತಿಸಲು ತಿಳುವಳಿಕೆ ನೀಡಲಾಗುವುದು ಎಂದು ಹೇಳಿದರು.
ಕೊಡಗು ಜಿಲ್ಲೆಯಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ಹೋಂ ಸ್ಟೇಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಸದ್ಯ 350 ಹೋಂ ಸ್ಟೇಗಳು ಪರವಾನಿಗೆ ಪಡೆದಿದ್ದು, 1 ಸಾವಿರಕ್ಕೂ ಹೆಚ್ಚು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಕುಶಾಲ ನಗರ, ವೀರಾಜಪೇಟೆ, ಮಡಿಕೇರಿಯ ಅಧಿಕಾರಿಗಳ ಸಭೆ ಕರೆದು ಪರವಾನಿಗೆ ಪಡೆದುಕೊಳ್ಳುವಂತೆ ಹಾಗೂ ನೀತಿ ನಿಯಮ ಪಾಲಿಸುವಂತೆ ತಿಳಿಸಲಾಗುವುದು ಎಂದರು.
ಫೌಂಟನ್ ಗೆ ಕಾಯಕಲ್ಪ : ವಿಶ್ವವಿಖ್ಯಾತ ಕೆ.ಆರ್.ಎಸ್ ಬೃಂದಾವನದ ಫೌಂಟನ್ ಗಳನ್ನು ದುರಸ್ಥಿಗೊಳಿಸಿ ಅವುಗಳಿಗೆ ಕಾಯಕಲ್ಪಿ ಕಲ್ಪಿಸುವಂತೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಲ್ಲಿ ಮನವಿ ಮಾಡಲಾಗಿದೆ. ಅಲ್ಲದೇ ಬೃಂದಾವನದಲ್ಲಿ ಪ್ರಾಥಮಿಕ ತುರ್ತು ಚಿಕಿತ್ಸಾ ಘಟಕ ಹಾಗೂ ವಾಹನವನ್ನು ತಕ್ಷಣವೇ ನಿಯೋಜಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಉಸ್ತುವಾರಿ ಆಕಾಂಕ್ಷಿಯಲ್ಲ :
ನಾಡ ಹಬ್ಬ ದಸರಾ ಆಚರಣೆಗೆ ಪ್ರಾಧಿಕಾರ ರಚಿಸುವ ಸಂಬಂಧ ಚರ್ಚೆ ನಡೆಯುತ್ತಿದೆ, ಇದನ್ನು ಜಿಲ್ಲಾ ಉಸ್ತುವಾರಿ ಸಚಿವರು ನಿರ್ಧರಿಸುತ್ತಾರೆ ಎಂದ ಅವರು, ಉಸ್ತುವಾರಿ ಸಚಿವ ಆಕಾಂಕ್ಷಿ ನಾನಲ್ಲ ಎಂದು ಪ್ರಶ್ನೆಗ ಉತ್ತರಿಸಿ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿಯೇ ಸರ್ಕಾರ ಐದು ವರ್ಷ ಅಧಿಕಾರ ಪೂರ್ಣಗೊಳಿಸಲಿದೆ ಎಂದರು.
ಸಂವಾದದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್ ಬಾಬು, ನಗರ ಉಪಾಧ್ಯಕ್ಷ ಸುಬ್ರಮಣ್ಯ, ಖಜಾಂಜಿ ಧಕ್ಷಿಣಾ ಮೂರ್ತಿ ಉಪಸ್ಥಿತರಿದ್ದರು.