ಗಂಗಾಧರ ಚಡಚಣ ನಿಗೂಢ ಸಾವು ಪ್ರಕರಣ: ಭೀಮಾತೀರದ ನದಿಗೆ ಹಾರಿ ಆರೋಪಿಯ ಪತ್ನಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
ವಿಜಯಪುರ, ಜೂ.29: ಭೀಮಾತೀರದ ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣದ ಆರೋಪಿಯ ಪತ್ನಿ ಭೀಮಾತೀರದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.
ಪ್ರಕರಣದ ಆರೋಪಿ ಸಿದ್ದಗೊಂಡಪ್ಪಮುಡವೆ ಪತ್ನಿ ಕಾಂಚನಾ(32) ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಗುರುತಿಸಿದ್ದಾರೆ.
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಧೂಳಖೇಡ ಬಳಿ ಇರುವ ಭೀಮಾ ನದಿಯ ಬ್ಯಾರೇಜ್ಗೆ ಹಾರಿ ಕಾಂಚನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಂಗಾಧರ ಕೊಲೆ ಪ್ರಕರಣದ ಆರೋಪಿಯಾಗಿದ್ದ ಸಿದ್ದಗೊಂಡಪ್ಪ ಕಳೆದ 2 ದಿನಗಳ ಹಿಂದೆ ಬಂದು ನ್ಯಾಯಾಲಯಕ್ಕೆ ಶರಣಾಗಿದ್ದರು. ಜೂ.27ರಂದು ಮೂವರು ಆರೋಪಿಗಳು ತಾವಾಗೇ ಬಂದು ಇಂಡಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಇದೀಗ ಹೆಚ್ಚಿನ ವಿಚಾರಣೆಗಾಗಿ ಸಿಐಡಿ ಅಧಿಕಾರಿಗಳ ವಶದಲ್ಲಿ ಸಿದ್ದಗೊಂಡಪ್ಪ ಸೇರಿ ಮೂವರು ಆರೋಪಿಗಳು ಇದ್ದಾರೆ. ಈ ಎಲ್ಲ ಘಟನೆಗಳಿಂದ ಮನನೊಂದು ಕಾಂಚನಾ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಆತ್ಮಹತ್ಯೆಗೆ ಶರಣಾಗಿರುವ ಕಾಂಚನಾ, ಗಂಗಾಧರ ಕೊಲೆ ಪ್ರಕರಣದ ಮೊದಲ ಆರೋಪಿ ಮಹಾದೇವ ಸಾಹುಕಾರ ಭೈರಗೊಂಡನ ಸಂಬಂಧಿ ಆಗಿದ್ದರು ಎನ್ನಲಾಗಿದೆ. ಈ ಸಂಬಂಧ ಝಳಕಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.