ಕುಮಾರಸ್ವಾಮಿ ಬಜೆಟ್‌ಗಿಲ್ಲ ಪಾವಿತ್ರತೆ: ಬಿ.ಎಸ್.ಯಡಿಯೂರಪ್ಪ
ಬಿಜೆಪಿ ಕಾರ್ಯಕಾರಣಿ ಸಭೆ

ಬೆಂಗಳೂರು, ಜೂ.29: ಬರೀ 37 ಶಾಸಕರ ಸಂಖ್ಯಾಬಲವನ್ನಿಟ್ಟುಕೊಂಡು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಲು ಮುಂದಾಗಿರುವ ಬಜೆಟ್‌ಗೆ ಯಾವುದೇ ರೀತಿಯ ಪಾವಿತ್ರತೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ ಬಿಜೆಪಿ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ 38 ಸ್ಥಾನ ಪಡೆದಿರುವ ಜೆಡಿಎಸ್ ಅವಕಾಶದ ಲಾಭ ಪಡೆದು ಅಧಿಕಾರ ಹಿಡಿದಿದೆ ಎಂದು ತಿಳಿಸಿದರು.
ದೇಶದ ಇತಿಹಾಸದಲ್ಲಿ ಮೂರನೇ ಸ್ಥಾನ ಪಡೆದ ಪಕ್ಷ ಇಂದು ಬಜೆಟ್ ಮಂಡಿಸಲು ಮುಂದಾಗಿರುವುದು ದುರಂತವೇ ಸರಿ. ಅದು ಅಲ್ಲದೆ, ಈ ಬಜೆಟ್‌ಗೆ ಸಮನ್ವಯ ಸಮಿತಿಯ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಯೂಡಿಯೂರಪ್ಪ ನುಡಿದರು.
ರಾಜ್ಯದ ಸಮ್ಮಿಶ್ರ ಸರಕಾರದ ವೈಫಲ್ಯಗಳ ಬಗ್ಗೆ ಮಾತನಾಡುವಾಗ ಬಿಜೆಪಿ ನಾಯಕರು ಎಚ್ಚರಿಕೆಯಿಂದ ಮಾತನಾಡಬೇಕು. ಮಾಧ್ಯಮಗಳಲ್ಲಿ ಚರ್ಚೆ ಮಾಡುವಾಗಲೂ ಎಚ್ಚರದಿಂದ ಇರಬೇಕು ಎಂದು ತಾಕೀತು ಮಾಡಿದ ಅವರು, ಪಕ್ಷಕ್ಕೆ ಮುಜುಗರ ತರುವಂತಹ ಯಾರೊಬ್ಬರನ್ನೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರಕಾರ 5 ವರ್ಷ ಪೂರ್ಣಗೊಳಿಸುವುದಿಲ್ಲ. ನಾವು ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸದೆ ಜನಾದೇಶ ಬರುವವರೆಗೂ ತಾಳ್ಮೆಯಿಂದಿರೋಣ ಎಂದ ಅವರು, ಈಗಾಗಲೇ ಎರಡು ಪಕ್ಷಗಳ ನಾಯಕರು ತಮ್ಮ ತಮ್ಮಲ್ಲೇ ಬೀದಿರಂಪ ಮಾಡುತ್ತಿದ್ದಾರೆ. ಸರಕಾರವನ್ನು ಅಸ್ಥಿರಗೊಳಿಸಲು ಕೈ ಹಾಕಬಾರದು ಎಂದು ತಿಳಿಸಿದರು.
ರಾಜ್ಯದ ಜನತೆ ನಮಗೆ ಹೆಚ್ಚಿನ ಸ್ಥಾನಗಳನ್ನು ನೀಡಿದ್ದರೂ ಪೂರ್ಣ ಬಹುಮತ ನೀಡಲಿಲ್ಲ. ಯಾವ ಕಾರಣಕ್ಕಾಗಿ ಬಿಜೆಪಿಗೆ ಹಿನ್ನಡೆಯಾಯಿತು ಎಂದು ಪ್ರಶ್ನಿಸುತ್ತಿದ್ದಾರೆ. ಸುಮಾರು 15 ಕ್ಷೇತ್ರಗಳಲ್ಲಿ 2ರಿಂದ 3 ಸಾವಿರ ಮತಗಳ ಅಂತರದಲ್ಲಿ ನಮ್ಮ ಅಭ್ಯರ್ಥಿಗಳು ಸೋತಿದ್ದಾರೆ. ಇದಕ್ಕೆ ಕಾರಣಗಳನ್ನು ಹುಡುಕಬೇಕಿದೆ ಎಂದರು.
ಸ್ವತಂತ್ರ ಭಾರತ ಇತಿಹಾಸದಲ್ಲಿ ಸುಪ್ರೀಂ ಕೋರ್ಟ್ ಕೇವಲ 24 ಗಂಟೆಯೊಳಗೆ ಬಹುಮತ ಸಾಬೀತು ಪಡಿಸಬೇಕೆಂದು ತೀರ್ಪು ನೀಡಿದ್ದು ಇದೇ ಮೊದಲು. ನಮಗೆ ಅವಕಾಶವಿದ್ದಿದ್ದರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅನೇಕ ಶಾಸಕರು ನಮ್ಮ ಪಕ್ಷಕ್ಕೆ ಬರಲು ಸಿದ್ಧರಿದ್ದರು. ಇದರಿಂದ ನಾವು ಹತಾಶರಾಗಿಲ್ಲ ಎಂದು ಹೇಳಿದರು.
ರಾಜ್ಯದ ಉಸ್ತುವಾರಿ ಮುರಳೀಧರರಾವ್ ಮಾತನಾಡಿ, ಕರ್ನಾಟಕದ ಜನತೆ ನಮ್ಮ ಪಕ್ಷಕ್ಕೆ ಬಹುಮತ ನೀಡದಿದ್ದರೂ ಜನಾದೇಶ ನಮ್ಮ ಪರವಾಗಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಗಳನ್ನು ಮುಂದಿಟ್ಟುಕೊಂಡು ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಲಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರ ಯಾವುದೇ ಕಾರಣಕ್ಕೂ ಐದು ವರ್ಷ ಪೂರೈಸುವುದಿಲ್ಲ. ಮುಂದೆ ನಮಗೆ ಒಳ್ಳೆಯ ಕಾಲ ಬಂದೇ ಬರುತ್ತದೆ ಎಂದು ತಿಳಿಸಿದರು.
ಇಂದಿರಾ ಗಾಂಧಿ ಆಡಳಿತ ಪ್ರಶ್ನಿಸಿದ ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿಯನ್ನು ಜೈಲಿಗೆ ಕಳುಹಿಸಲಾಗಿತ್ತು. ದೇಶವನ್ನು ಅಭಿವೃದ್ದಿಯತ್ತ ಕೊಂಡೊಯ್ಯಲು ಪ್ರಧಾನಿ ನರೇಂದ್ರ ಮೋದಿ ಪ್ರವಾಸ ಕೈಗೊಂಡಿದ್ದನ್ನು ಟೀಕಿಸಿರುವ ರಾಹುಲ್ ಗಾಂಧಿಯನ್ನು ಜೈಲಿಗೆ ಕಳುಹಿಸಿಲ್ಲ ಎಂದು ಹೇಳಿದರು.
ಸಭೆಯಲ್ಲಿ ಕೇಂದ್ರ ಸಚಿವರಾದ ಅನಂತ್‌ಕುಮಾರ್, ರಮೇಶ್ ಜಿಗಜಿಣಗಿ, ಬಿಜೆಪಿ ಮುಖಂಡರಾದ ಆರ್.ಅಶೋಕ್, ಜಗದೀಶ್ ಶೆಟ್ಟರ್, ಗೋವಿಂದ ಕಾರಜೊಳ, ಶೋಭಾ ಕರಂದ್ಲಾಜೆ, ಶ್ರೀರಾಮುಲು ಸೇರಿ ಪ್ರಮುಖರಿದ್ದರು.
ಡಿಕೆಶಿ ಕಮಿಷನ್: ಬಿಎಸ್‌ವೈ
ಹಿಂದಿನ ಸರಕಾರದ ಅವಧಿಯಲ್ಲಿ ನೀವು ಎಷ್ಟು ಕಮಿಷನ್ ಕೊಟ್ಟಿದ್ದೀರೋ ನನಗೆ ಗೊತ್ತಿಲ್ಲ. ಈಗ ನಾನು ಸಚಿವನಾಗಿದ್ದೇನೆ. ನೀರಾವರಿ ಯೋಜನೆಯ ಬಿಲ್ಗಳು ಪಾವತಿಯಾಗಬೇಕಾದರೆ ಕಮಿಷನ್ ಕೊಡುವಂತೆ ನೀರಾವರಿ ಸಚಿವರು ಗುತ್ತಿಗೆದಾರರಿಗೆ ಒತ್ತಡ ಹಾಕುತ್ತಿದ್ದಾರೆ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ಯಡಿಯೂರಪ್ಪ ಆರೋಪಿಸಿದರು.







