ಮಲ್ಟಿಪ್ಲೆಕ್ಸ್‌ನಲ್ಲಿ ದುಬಾರಿ ದರ ವಿವಾದ: ಎಂಎನ್‌ಎಸ್ ಕಾರ್ಯಕರ್ತರಿಂದ ದಾಳಿ

ಪುಣೆ, ಜೂ.29: ಮಲ್ಟಿಪ್ಲೆಕ್ಸ್‌ನಲ್ಲಿ ದುಬಾರಿ ದರಕ್ಕೆ ತಿಂಡಿ ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಚಿತ್ರಮಂದಿರದ ಮ್ಯಾನೇಜರ್ ಮೇಲೆ ಮಹಾರಾಷ್ಟ್ರ ನವನಿರ್ಮಾಣ ಸೇನಾದ ಕಾರ್ಯರ್ತರು ಹಲ್ಲೆ ನಡೆಸಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಕೋರರ ಪೈಕಿ ಇಲ್ಲಿನ ಕೊತ್ರುಡ್‌ನ ಮಾಜಿ ಕಾರ್ಪೊರೇಟರ್ ಕಿಶೋರ್ ಶಿಂಧೆ ಕೂಡಾ ಸೇರಿದ್ದು ಪೊಲೀಸರು ಮಲ್ಟಿಪ್ಲೆಕ್ಸ್ ಆಡಳಿತ ಮಂಡಳಿ ನೀಡಿದ ದೂರಿನಂತೆ ಶಿಂಧೆ ಹಾಗೂ ಇತರರ ವಿರುದ್ಧ ಪ್ರಕರಣ ದೂರು ದಾಖಲಿಸಿದ್ದಾರೆ. ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊ ದೃಶ್ಯಾವಳಿಯಲ್ಲಿ ಡಝನ್‌ಗೂ ಅಧಿಕ ಇದ್ದ ಎಂಎನ್‌ಎಸ್ ಕಾರ್ಯಕರ್ತರು ಸೇನಾಪತಿ ಬಾಪತ್ ರಸ್ತೆಯಲ್ಲಿರುವ ಪಿವಿಆರ್ ಐಕಾನ್ ಮಲ್ಟಿಪ್ಲೆಕ್ಸ್‌ಗೆ ನುಗ್ಗಿ ಅಲ್ಲಿದ್ದ ಮ್ಯಾನೇಜರ್ ಕೆನ್ನೆಗೆ ಹೊಡೆಯುತ್ತಿರುವುದು ದಾಖಲಾಗಿದೆ. ಈ ವೇಳೆ ಹಲ್ಲೆಕೋರರು ಮಲ್ಟಿಪ್ಲೆಕ್ಸ್‌ನಲ್ಲಿ ತಿಂಡಿಗಳನ್ನು ದುಬಾರಿ ದರಕ್ಕೆ ಮಾರುವುದುರ ವಿರುದ್ಧ ಫಲಕಗಳನ್ನು ಹಿಡಿದುಕೊಂಡಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.





