ಮಲೆನಾಡಿನಲ್ಲಿ ತಗ್ಗಿದ ಮಳೆಯ ಆರ್ಭಟ
ಶಿವಮೊಗ್ಗ, ಜೂ. 29: ಮಲೆನಾಡಿನಲ್ಲಿ ಮಳೆ ಆರ್ಭಟ ತಗ್ಗಿದೆ. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ವರ್ಷಧಾರೆಯ ಅಬ್ಬರ ಕುಗ್ಗಿದೆ. ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದ ಪ್ರಮುಖ ನದಿಗಳ ನೀರಿನ ಹರಿವಿನಲ್ಲಿ ಇಳಿಕೆ ಕಂಡುಬಂದಿದೆ. ಉಳಿದಂತೆ ಜಲಾಶಯಗಳ ಒಳಹರಿವಿನಲ್ಲಿ ಯಥಾಸ್ಥಿತಿ ಕಂಡುಬಂದಿದೆ.
ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಮಳೆ ಅಂಕಿಅಂಶದ ಪ್ರಕಾರ, ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಏಳು ತಾಲೂಕು ಕೇಂದ್ರ ವ್ಯಾಪ್ತಿಯಲ್ಲಿ ಬಿದ್ದ ಒಟ್ಟಾರೆ ಮಳೆಯ ಸರಾಸರಿ ಪ್ರಮಾಣ 6.63 ಮಿಲಿ ಮೀಟರ್ (ಮಿ.ಮೀ.) ಆಗಿದೆ.
ಶಿವಮೊಗ್ಗದಲ್ಲಿ 1.60 ಮಿ.ಮೀ., ಭದ್ರಾವತಿಯಲ್ಲಿ 1.40 ಮಿ.ಮೀ., ತೀರ್ಥಹಳ್ಳಿಯಲ್ಲಿ 12.20 ಮಿ.ಮೀ., ಸಾಗರದಲ್ಲಿ 12.40 ಮಿ.ಮೀ., ಶಿಕಾರಿಪುರದಲ್ಲಿ 2.40 ಮಿ.ಮೀ., ಸೊರಬದಲ್ಲಿ 4 ಮಿ.ಮೀ. ಹಾಗೂ ಹೊಸನಗರದಲ್ಲಿ 12.40 ಮಿ.ಮೀ. ವರ್ಷಧಾರೆಯಾಗಿದೆ.
ಪಶ್ಚಿಮಘಟ್ಟ ವ್ಯಾಪ್ತಿಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ 35.6 ಮಿ.ಮೀ., ಹೊಸನಗರ ತಾಲೂಕಿನ ಯಡೂರಿನಲ್ಲಿ 83 ಮಿ.ಮೀ., ಮಾಣಿಯಲ್ಲಿ 52 ಮಿ.ಮೀ., ಹುಲಿಕಲ್ಲುವಿನಲ್ಲಿ 71 ಮಿ.ಮೀ. ಹಾಗೂ ಮಾಸ್ತಿಕಟ್ಟೆಯಲ್ಲಿ 57 ಮಿ.ಮೀ. ವರ್ಷಧಾರೆಯಾಗಿದೆ.
ಶುಕ್ರವಾರದ ಬೆಳಿಗ್ಗೆಯ ಮಾಹಿತಿಯಂತೆ, ಲಿಂಗನಮಕ್ಕಿ ಡ್ಯಾಂನ ನೀರಿನ ಮಟ್ಟ 1772.60 (ಗರಿಷ್ಠ ಮಟ್ಟ : 1819) ಅಡಿಯಿದೆ. 40,639 ಕ್ಯೂಸೆಕ್ ಒಳಹರಿವಿದ್ದು, 279.71 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಡ್ಯಾಂ ವ್ಯಾಪ್ತಿಯಲ್ಲಿ 32.20 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 1752.95 ಅಡಿ ನೀರು ಸಂಗ್ರಹವಾಗಿತ್ತು.
ಭದ್ರಾ ಡ್ಯಾಂನ ನೀರಿನ ಮಟ್ಟ 145.90 (ಗರಿಷ್ಠ ಮಟ್ಟ : 186) ಅಡಿಯಿದೆ. 23,564 ಕ್ಯೂಸೆಕ್ ಒಳಹರಿವಿದ್ದು, 290 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 118 ಅಡಿ ನೀರು ಸಂಗ್ರಹವಾಗಿತ್ತು. ಉಳಿದಂತೆ ತುಂಗಾ ಡ್ಯಾಂ ಈಗಾಗಲೇ ಗರಿಷ್ಠ ಮಟ್ಟವಾದ 588.24 ಅಡಿ ತಲುಪಿದೆ. ಪ್ರಸ್ತುತ 43,003 ಕ್ಯೂಸೆಕ್ ಒಳಹರಿವಿದ್ದು, 42,968 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.