ಬಗೆಹರಿಯದ ದಾರಿದೀಪ ಸಮಸ್ಯೆ: ಉಡುಪಿ ನಗರಸಭೆಯಲ್ಲಿ ಗದ್ದಲ
ಸ್ಥಳೀಯರಿಗೆ ನಿರ್ವಹಣೆ, 1500 ಎಲ್‌ಇಡಿ ದೀಪ ಖರೀದಿಗೆ ನಿರ್ಣಯ

ಉಡುಪಿ, ಜೂ.29: ಉಡುಪಿ ನಗರದ ದಾರಿದೀಪಗಳ ನಿರ್ವಹಣೆ ಕುರಿತು ಇಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಬಾರೀ ಗದ್ದಲ ಉಂಟಾಗಿದ್ದು, ಇದರ ನಿರ್ವಹಣೆಯನ್ನು ಸ್ಥಳೀಯರಿಗೆ ವಹಿಸಿಕೊಡುವ ಕುರಿತು ಸರಕಾರವನ್ನು ಒತ್ತಾಯಿಸು ನಿರ್ಣಯವನ್ನು ಕೈಗೊಳ್ಳಲಾಯಿತು.
ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಯಶಪಾಲ್ ಸುವರ್ಣ, ಮಳೆಗಾಳಿಯಿಂದ ನಗರದಲ್ಲಿ ಸಾಕಷ್ಟು ದಾರಿದೀಪಗಳು ಹಾಳಾಗಿವೆ. ಈ ಬಗ್ಗೆ ನಗರಸಭೆ ಇನ್ನು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಎಲ್ಲ ಭಾಗ್ಯಗಳ ಜೊತೆ ಉಡುಪಿ ನಗರದ ಜನತೆ ಕತ್ತಲೆ ಭಾಗ್ಯವನ್ನು ಅನುಭವಿಸುತ್ತಿದ್ದಾರೆಂದು ಮಹೇಶ್ ಠಾಕೂರ್ ಟೀಕಿಸಿದರು.
ಇದೇ ವಿಚಾರದಲ್ಲಿ ವಿಪಕ್ಷ ಸದಸ್ಯರು ಸಭೆಯಲ್ಲಿ ಗದ್ದಲ ಉಂಟು ಮಾಡಿ ದರು. ಅಧ್ಯಕ್ಷರು ಹಾಗೂ ಪೌರಾಯುಕ್ತರಿಗೆ ಉತ್ತರ ನೀಡಲು ಅವಕಾಶ ನೀಡದೆ ನಗರಸಭೆ ವಿರುದ್ಧ ಆರೋಪಗಳ ಸುರಿಮಳೆಗೈದರು. ಸದಸ್ಯರಾದ ತೆಂಕಪೇಟೆ ವಾರ್ಡನ್ ಶ್ಯಾಮ್ ಪ್ರಸಾದ್ ಕುಡ್ವ, ಚಿಟ್ಪಾಡಿ ವಾರ್ಡ್‌ನ ನವೀನ್ ಭಂಡಾರಿ ಸೇರಿದಂತೆ ಹೆಚ್ಚಿನ ಸದಸ್ಯರು ತಮ್ಮ ವಾರ್ಡ್‌ಗಳ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಪೌರಾಯುಕ್ತ ಜನಾರ್ದನ್ ಜಿ.ಸಿ., ಶಿವಮೊಗ್ಗದ ರಾಮ್ ಮೋಹನ್ ಇಲೆಕ್ಟ್ರಿಕಲ್ಸ್‌ಗೆ ನೀಡಿದ ದಾರಿದೀಪದ ಟೆಂಡರ್ ಅವಧಿಯು 2018ರ ಮಾರ್ಚ್‌ಗೆ ಮುಕ್ತಾಯಗೊಂಡಿದೆ. ಮತ್ತೆ ಇ ಟೆಂಡರ್ ಕರೆದಾಗ ಇದೇ ಸಂಸ್ಥೆಯವರು ಮಾತ್ರ ಅರ್ಜಿ ಹಾಕಿದರು. ಆದರೆ ಅವರ ನಿರ್ವಹಣೆ ಸರಿ ಇಲ್ಲ ಎಂದು ಟೆಂಡರ್ ರದ್ದು ಮಾಡಲಾಯಿತು. ಐದು ವರ್ಷಗಳ ಕಾಲ ನಿರ್ವಹಣೆ ಮಾಡಬೇಕು ಸೇರಿದಂತೆ ಹಿಂದೆ ಆಗಿರುವ ಕೆಲವು ತಪ್ಪುಗಳನ್ನು ಸರಿಪಡಿಸಿ ಮತ್ತೆ ಹೊಸದಾಗಿ ಟೆಂಡರ್ ಕರೆಯಲು ಈಗಾಗಲೇ ನಿರ್ಧರಿಸ ಲಾಗಿದೆ ಎಂದರು.
ಈಗಾಗಲೇ ಹಾಳಾಗಿರುವ ದಾರಿದೀಪಗಳಿಗೆ ಮರು ಜೋಡಣೆ ಮಾಡಲು 500 ಎಲ್‌ಇಡಿ ದೀಪಗಳನ್ನು ಜಮ್ಸ್‌ನಲ್ಲಿ ಖರೀದಿಸಲು ಆರ್ಡರ್ ಮಾಡ ಲಾಗಿದೆ. ಇನ್ನು 1000 ಟ್ಯೂಬ್‌ಲೈಟ್‌ಗಳನ್ನು ಖರೀದಿಸಲು ಟೆಂಡರ್ ಕರೆಯ ಲಾಗಿದೆ ಎಂದು ಪೌರಾಯುಕ್ತರು ಸಭೆಗೆ ತಿಳಿಸಿದರು.
ಗಲಾಟೆ ಬೇಡ, ಚರ್ಚಿಸಿ: ಪೌರಾಯುಕ್ತರ ಉತ್ತರ ವಿಚಾರದಲ್ಲಿ ವಿಪಕ್ಷ ಬಿಜೆಪಿ ಸದಸ್ಯರು ಮತ್ತೆ ವಾಗ್ವಾದ ಮುಂದುವರೆಸಿದರು. ಆಗ ಸಭೆಯಲ್ಲಿ ಹಾಜರಿದ್ದ ಉಡುಪಿ ಶಾಸಕ ಕೆ.ರಘುಪತಿ ಭಟ್ ಮಧ್ಯೆ ಪ್ರವೇಶಿಸಿ ತಮ್ಮ ಪಕ್ಷದ ಸದಸ್ಯರುಗಳನ್ನು ಸಮಾಧಾನ ಪಡಿಸಿ, ನಗರಸಭೆಗೆ ಸ್ವಲ್ಪ ಕಾಲಾವಕಾಶ ನೀಡ ಬೇಕಾಗಿದೆ. ಕೇವಲ ಗಲಾಟೆ ಮಾಡುವುದರಿಂದ ಸಮಸ್ಯೆ ಬಗಹರಿಯುವುದಿಲ್ಲ. ಈ ಬಗ್ಗೆ ಚರ್ಚೆ ನಡೆಸಬೇಕು ಎಂದರು.
ನಗರದ ದಾರಿದೀಪಗಳ ನಿರ್ವಹಣೆಯನ್ನು ವಿಂಗಡಣೆ ಮಾಡದೆ ಎಲ್ಲವನ್ನು ಒಟ್ಟಿಗೆ ಸೇರಿಸಿ ಒಬ್ಬರಿಗೆ ವಹಿಸಿಕೊಡಬೇಕು. ಈ ಹಿಂದೆ ಕಳಪೆ ನಿರ್ವಹಣೆ ಮಾಡಿದವರು ಟೆಂಡರ್‌ನಲ್ಲಿ ಭಾಗವಹಿಸದಂತೆ ಮಾಡುವ ಕುರಿತು ನಿರ್ಣಯ ತೆಗೆದುಕೊಳ್ಳಬೇಕು. ಸ್ಥಳೀಯರಿಗೆ ನಿರ್ವಹಣೆ ಮಾಡಲು ನಗರಸಭೆಯ ಎಲ್ಲ ಸದಸ್ಯರು ನಿರ್ಣಯ ಮಾಡಿ ಸರಕಾರಕ್ಕೆ ಕಳುಹಿಸಬೇಕು ಎಂದು ರಘುಪತಿ ಭಟ್ ಸಲಹೆ ನೀಡಿದರು.
ಇ ಟೆಂಡರ್‌ನಲ್ಲಿ ಸ್ಥಳೀಯರಿಗೆ ನಿರ್ವಹಣೆ ವಹಿಸಿಕೊಡಲು ಅವಕಾಶವಿಲ್ಲ. ಈ ಕುರಿತ ನಿರ್ಣಯ ಸರಕಾರಕ್ಕೆ ಕಳುಹಿಸಿದರೂ ಅದು ತಿರಸ್ಕೃತಗೊಳ್ಳಲಿದೆ. ಹೀಗಾಗಿ ದಾರಿದೀಪದ ನಿರ್ವಹಣೆ ಮತ್ತಷ್ಟು ವಿಳಂಬವಾಗಿ ಸಮಸ್ಯೆ ಉಂಟಾಗುತ್ತದೆ. ಆದುದರಿಂದ ಸ್ಥಳೀಯರಿಗೆ ನಿರ್ವಹಣೆ ನೀಡುವ ಜೊತೆ ಆನ್‌ಲೈನ್ ನಿರ್ವಹಣೆಯ ಬಗ್ಗೆಯೂ ನಿರ್ಣಯ ಮಾಡಿ ಸರಕಾರಕ್ಕೆ ಕಳುಹಿಸಬೇಕು ಎಂದು ಶಶಿರಾಜ್ ಕುಂದರ್ ಸಭೆಯಲ್ಲಿ ಒತ್ತಾಯಿಸಿದರು. ಅದರಂತೆ ನಿರ್ಣಯ ತೆಗೆದುಕೊಳ್ಳಲಾಯಿತು.
ಹಾಳಾಗಿರುವ ಟ್ಯೂಬ್‌ಲೈಟ್‌ಗಳ ಬದಲು ಎಲ್‌ಇಡಿ ದೀಪಗಳನ್ನೇ ಹಾಕುವ ಕುರಿತು ಸಭೆಯಲ್ಲಿ ಒತ್ತಾಯಿಸಲಾಯಿತು. ಅದರಂತೆ 1500 ಎಲ್‌ಇಡಿ ದಾರಿದೀಪಗಳನ್ನು ಜಮ್‌ನಲ್ಲಿ ಖರೀದಿಸುವ ಕುರಿತು ನಿರ್ಣಯ ತೆಗೆದುಕೊಳ್ಳಲಾಯಿತು. ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್ ಉಪಸ್ಥಿತರಿದ್ದರು.
ಮಲ್ಪೆ- ಆದಿಉಡುಪಿ ರಸ್ತೆ ಕಾಮಗಾರಿ
ಮಲ್ಪೆ- ಆದಿಉಡುಪಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣ ಕಾಂಕ್ರೀಟಿಕ ರಣಗೊಳಿಸುವ ಕಾಮಗಾರಿಯನ್ನು ಈಗಾಗಲೇ ಗುತ್ತಿಗೆದಾರರಿಗೆ ಹಸ್ತಾಂತರ ಮಾಡಲಾಗಿದ್ದು, ತಕ್ಷಣವೇ ಕೆಲಸ ಆರಂಭವಾಗಲಿದೆ. ಇಲ್ಲಿ ಭೂಸ್ವಾಧೀನಕ್ಕೆ ಇನ್ನು ಅನುದಾನ ನಿಗದಿಯಾಗಿಲ್ಲ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.
ಆದಿಉಡುಪಿಯಿಂದ ಕಡಿಯಾಳಿಯವರೆಗೆ ಈಗ ಇರುವ ರಸ್ತೆಯನ್ನೇ ಮುಂದುವರೆಸಿ, ಕಡಿಯಾಳಿಯಿಂದ ಪರ್ಕಳದವರೆಗೆ 30 ಮೀಟರ್ ರಸ್ತೆಯನ್ನು ಭೂಸ್ವಾಧೀನ ಮಾಡಲಾಗುವುದು. ಇದಕ್ಕೆ 7.84ಕೋಟಿ ರೂ. ಮೀಸಲಿರಿಸ ಲಾಗಿದೆ. ಇಂದ್ರಾಳಿಯಲ್ಲಿ ರೈಲ್ವೆ ಸೇತುವೆ ನಿರ್ಮಾಣವಾಗಲಿದೆ. ಮಣಿಪಾಲ ಕುಂಡೇಲು ಕಾಡು ಪ್ರದೇಶದಲ್ಲಿ ರಸ್ತೆ ವಿಸ್ತರಣೆ ಮಾಡಲಾಗುವುದು. ಈ ಎಲ್ಲ ಕಾಮಗಾರಿ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಸ್ಲಂ ಪ್ರದೇಶದಲ್ಲಿ 500 ಮನೆ ಮಂಜೂರು
ಉಡುಪಿ ನಗರಸಭೆ ವ್ಯಾಪ್ತಿಯ ಬಾಳೆಕಟ್ಟೆ, ಬಲರಾಮನಗರ, ನ್ಯೂ ಕಾಲೋನಿ, ವಿಷ್ಣುಮೂರ್ತಿ ನಗರದ ಸ್ಲಂ ಪ್ರದೇಶಗಳಿಗೆ ಒಟ್ಟು 500 ಮನೆಗಳು ಮಂಜೂರಾಗಿದ್ದು, ಐದು ಲಕ್ಷ ರೂ. ವೆಚ್ಚದ ಮನೆಗಳನ್ನು ಗುತ್ತಿಗೆ ವಹಿಸಿ ಕೊಂಡವರೆ ನಿರ್ಮಿಸಿಕೊಡಲಿದ್ದಾರೆ. ಈಗಾಗಲೇ ಇದಕ್ಕೆ ರಾಜ್ಯದಲ್ಲಿ ಟೆಂಡರ್ ಆಗಿದೆ ಎಂದು ಶಾಸಕ ಕೆ.ರಘುಪತಿ ಭಟ್ ಸಭೆಗೆ ಮಾಹಿತಿ ನೀಡಿದರು.







