ಯುವಶಕ್ತಿಯ ಸದ್ಬಳಕೆಯಿಂದ ದೇಶದ ಅಭಿವೃದ್ಧಿ: ಡಿ.ಎಸ್.ರವಿ

ಉಡುಪಿ, ಜೂ.29: ಯುವಶಕ್ತಿಯ ಸದ್ಬಳಕೆಯಿಂದ ದೇಶದ ಅಭಿವೃದ್ಧಿ ಇನ್ನಷ್ಟು ಹೆಚ್ಚಿನ ವೇಗದಲ್ಲಿ ಯಶಸ್ಸು ಪಡೆಯಲು ಸಾಧ್ಯ. ರೋಟರಿ ಸಂಸ್ಥೆಗಳು ಯುವ ಜನತೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳಿಸುವ ಮೂಲಕ ರೋಟರಿ ಧ್ಯೇಯ ಉದ್ದೇಶಗಳನ್ನು ಈಡೇರಿಸಿ ದೇಶದ ಅಭಿವೃದ್ಧಿಗೆ ಸಹಕರಿಸ ಬೇಕು ಎಂದು ರೋಟರಿ ಜಿಲ್ಲೆ 3182ರ ಮಾಜಿ ಗವರ್ನರ್ ಡಿ.ಎಸ್.ರವಿ ಹೇಳಿದ್ದಾರೆ.
ಉಡುಪಿ ಅಜ್ಜರಕಾಡಿನ ಪುರಭವನದಲ್ಲಿ ಬುಧವಾರ ನಡೆದ ರೋಟರಿ ಅಂಬಲಪಾಡಿಯ 18ನೆ ಸನದು ದಿನ ಹಾಗೂ ನೂತನ ಅಧ್ಯಕ್ಷ ಖಲೀಲ್ ಅಹ್ಮದ್ ಮತ್ತು ಅವರ ತಂಡದ ಪದ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಈ ಸಂದರ್ಭದಲ್ಲಿ ಅಂಬಲಪಾಡಿ ವ್ಯಾಪ್ತಿಯ ಆರು ಶಾಲೆಗಳ ವಿದ್ಯಾರ್ಥಿ ಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಅಲ್ಲದೆ ರೋಟರಿ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ರೋಟರಿ ಸಹಾಯಕ ಗವರ್ನರ್‌ಗಳಾದ ಚಂದ್ರ ನಾರಿ, ಸುಬ್ಬಣ್ಣ ಪೈ, ವಲಯ ಸೇನಾನಿಗಳಾದ ಅಶೋಕ್ ಶೆಟ್ಟಿ, ಅರುಣ್ ಶೆಟ್ಟಿ ಉಪಸ್ಥಿತರಿದ್ದರು. ದಶರಥ್ ಸಿಂಗ್ ಸ್ವಾಗತಿಸಿದರು. ಶ್ರೀಶ ಆಚಾರ್ ವರದಿ ವಾಚಿಸಿದರು. ಕಾರ್ಯದರ್ಶಿ ದುರ್ಗಪ್ರಸಾದ್ ವಂದಿಸಿದರು. ಜಯಪ್ರಕಾಶ್ ಕೆದ್ಲಾಯ ಕಾರ್ಯಕ್ರಮ ನಿರೂಪಿಸಿದರು.







