ತಲಪಾಡಿ ಟೋಲ್‌ಗೇಟ್ ವಿರುದ್ಧ ಗ್ರಾಮಸ್ಥರ ಆಕ್ರೋಶ
ತಲಪಾಡಿ ಗ್ರಾಮ ಸಭೆ

ಉಳ್ಳಾಲ, ಜೂ. 29: ತಲಪಾಡಿ ಗ್ರಾಮ ಪಂಚಾಯತಿಯ ಗ್ರಾಮ ಸಭೆಯು ಶುಕ್ರವಾರ ನಡೆದಿದ್ದು, ಸಭೆಯಲ್ಲಿ ತಲಪಾಡಿ ಟೋಲ್ ಗೇಟ್ ವಿವಾದದ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು.
ಸಭೆಯ ಆರಂಭದಲ್ಲೇ ಗಡಿನಾಡ ರಕ್ಷಣಾ ವೇದಿಕೆಯ ಸಿದ್ದೀಕ್ ತಲಪಾಡಿ ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣ ಗೊಳ್ಳದಿದ್ದರೂ ಟೋಲ್ ಸಂಗ್ರಹ ನಡೆಯುತ್ತಿದೆ, ಸ್ಥಳೀಯರಿಗೆ ಉಚಿತ ಪ್ರಯಾಣವಾಗಿದ್ದರೂ ಟೋಲ್‌ನಲ್ಲಿರುವವರು ವಾಹನ, ಚಾಲನಾ ದಾಖಲೆಗಳನ್ನು ಕೇಳುತ್ತಾ, ಗೂಂಡಾಗಿರಿ ತೋರಿಸುತ್ತಿದ್ದಾರೆ. ಈ ದಾಖಲೆಗಳನ್ನು ಕೇಳುವ ಅಧಿಕಾರ ಆರ್‌ಟಿಒಗೆ ಮಾತ್ರವೇ ಇದೆ. ಗುತ್ತಿಗೆ ಸಂಸ್ಥೆಯ ಬೇಜವಾಬ್ದಾರಿಯಿಂದ ಹೆದ್ದಾರಿಯಲ್ಲಿ ಜೀವ ಬಲಿಯಾಗುತ್ತಿದೆ. ಈ ಬಗ್ಗೆ ನಾವು ಯಾರಲ್ಲಿ ಹೇಳಬೇಕು, ಹೆದ್ದಾರಿ ಇಲಾಖೆಯ ಅಧಿಕಾರಿಗಳು ಗ್ರಾಮಸಭೆಯಿಂದ ತಪ್ಪಿಸಿಕೊಳ್ಳುತ್ತಿ ದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಸುರೇಶ್ ಆಳ್ವ, ಕಂಪನಿ ಗ್ರಾಮ ಪಂಚಾಯಿತಿಯನ್ನು ಕ್ಯಾರ್ ಮಾಡುತ್ತಿಲ್ಲ. ಕೆ.ಸಿ.ರೋಡ್‌ನಿಂದ ಮೇಲಿನ ತಲಪಾಡಿವರೆಗೆ ಚರಂಡಿ ಬಸ್ ತಂಗುದಾಣ ನಿರ್ಮಿಸಿಲ್ಲ. ಆದರೂ ಪಂಚಾಯಿತಿ ಸುಮ್ಮನೆ ಕೂತಿಲ್ಲ, ಗ್ರಾಮಸ್ಥರಿಗೆ ಯಾವುದೇ ರೀತಿಯಲ್ಲೂ ತೊಂದರೆ ಕೊಟ್ಟರೆ ನಾವು ನಿಮ್ಮ ಜೊತೆಗಿದ್ದು ಹೋರಾಟ ಮಾಡುತ್ತೇವೆ, ಇದುವರೆಗೆ ನಾವು ಬೆಂಬಲ ನೀಡಿದ್ದೇವೆ ಎಂದರು.
ಈ ಸಂದರ್ಭ ಧ್ವನಿಗೂಡಿಸಿದ ಗ್ರಾಮಸ್ಥರು, ಟೋಲ್ ಗೇಟ್ ಬಳಿ ಕಂಪನಿ ನಿರ್ಮಿಸಿರುವ ಅನಧಿಕೃತ ಕಟ್ಟಡ ವಿರುದ್ಧ ನ್ಯಾಯಾಲಯದ ಮೊರೆ ಹೋಗಿ, ಪಂಚಾಯಿತಿ ಜೊತೆ ನಾವಿದ್ದೇವೆ ಎಂದು ಬೆಂಬಲ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗಕ್ಕೂ ಸಿಗಲಿ ಆರೋಗ್ಯ ಭಾಗ್ಯ
ಇದರಿಂದ ಅಸಮಾಧಾನಗೊಂಡ ಅಬ್ಬಾಸ್ ಉಚ್ಚಿಲ್, ವೆನ್ಲಾಕ್‌ನಲ್ಲಿ ಹಿರಿಯ ನಾಗರಿಕರಿಗೆ ಅವಮಾನ ಮಾಡಲಾಗುತ್ತಿದೆ. ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಭಾಗದಲ್ಲಿ ಹೆಚ್ಚು ಬಡವರಿದ್ದು, ಮೊದಲು ಈ ಭಾಗದ ಫಲಾನುಭವಿಗಳಿಗೆ ಆರೋಗ್ಯ ಕಾರ್ಡ್ ವಿತರಿಸುವ ಕ್ರಮಕ್ಕಾಗಿ ಗ್ರಾಮಸಭೆ ನಿರ್ಣಯಿಸಲಿ ಎಂದು ಹೇಳಿದ್ದನ್ನು ಗ್ರಾಮಸ್ಥರು ಬೆಂಬಲಿಸಿದರು. ಆರೋಗ್ಯ ಭಾಗ್ಯ ಕಾರ್ಡ್‌ಗಳು ಮತ್ತೆ ನೀಡುವ ಕ್ರಮ ಆರಂಭಗೊಂಡಿದ್ದು, ವೆನ್ಲಾಕ್‌ನಲ್ಲಿ ನೀಡಲಾಗುತ್ತಿದೆ. ಮೊದಲು ನಗರ ಪ್ರದೇಶಗಳ ಫಲಾನುಭವಿಗಳಿಗೆ ನೀಡಿ ನಂತರ ಗ್ರಾಮೀಣ ಭಾಗಕ್ಕೆ ನೀಡುವ ಬಗ್ಗೆ ಸರ್ಕಾರದ ನಿಯಮದಲ್ಲಿ ತಿಳಿಸಲಾಗಿದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಗೋಪಿಪ್ರಕಾಶ್ ತಿಳಿಸಿದರು.
ದ.ಕ. ಜಿಲ್ಲೆಯಲ್ಲಿ ಮೀನಿಗೆ ರಸಾಯನ ಬಳಸುವ ಬಗ್ಗೆ ಮಾಹಿತಿಯಿಲ್ಲ ಎಂದು ಮೀನುಗಾರಿಕಾ ಇಲಾಖೆಯ ಅಧಿಕಾರಿ ಸುಶ್ಮಿತಾ ಅವರು ಹೇಳಿದರು. ಕರ್ನಾಟಕದಿಂದ ಹೊರಹೋಗುವ ಮೀನುಗಳನ್ನು ವಶಕ್ಕೆ ಪಡೆಯಲಾಗುತ್ತಿದೆ, ಆದರೆ ನಮ್ಮಲ್ಲಿ ರಸಾಯನ ಹಾಕುತ್ತಿಲ್ಲ ಎಂದು ತಾವು ಹೇಳುತ್ತಿದ್ದೀರಿ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಅಲ್ಲದೆ ಗ್ರಾಮಸಭೆಗೆ ಪ್ರಪ್ರಥಮ ಬಾರಿ ಮೀನುಗಾರಿಕಾ ಇಲಾಖೆಯಿಂದ ಬಂದ ಅಧಿಕಾರಿಗೆ ಗ್ರಾಮಸ್ಥರು ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಶ್ಯಾಮಲಾ ಸಿ.ಕೆ ನೋಡೆಲ್ ಅಧಿಕಾರಿಯಾಗಿದ್ದರು. ತಾಲೂಕು ಪಂಚಾಯಿತಿ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಕೊಳಂಗೆರೆ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಲಕ್ಷ್ಮಿ ಹೆಗ್ಡೆ, ಮೆಸ್ಕಾಂ ಎ.ಇ. ದಯಾನಂದ್, ಜಿಲ್ಲಾ ಪಂಚಾಯಿತಿ ಇಂಜಿನಿಯರ್ ನಿತಿನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಾರದಾ ಇನ್ನಿತರ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.







