ರೈತರ ಬೆಳೆ ಸಾಲ ಮನ್ನಾ ವಿಚಾರದಲ್ಲಿ ಸಂಘರ್ಷವಿಲ್ಲ: ಡಾ.ಎಂ.ವೀರಪ್ಪ ಮೊಯ್ಲಿ

ಬೆಂಗಳೂರು, ಜೂ.29: ರೈತರ ಬೆಳೆ ಸಾಲ ಮನ್ನಾ ಹಾಗೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ವಿಚಾರದಲ್ಲಿ ಯಾವುದೆ ಸಂಘರ್ಷವಿಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ಪ್ರಣಾಳಿಕೆಗಳ ಬಗ್ಗೆ ಚರ್ಚಿಸಿ, ಸರ್ವಾನುಮತದಿಂದ ಎಲ್ಲ ನಿರ್ಣಯ ಕೈಗೊಂಡಿದ್ದೇವೆ ಎಂದು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಕರಡು ಸಿದ್ಧತಾ ಸಮಿತಿ ಅಧ್ಯಕ್ಷ ಡಾ.ಎಂ.ವೀರಪ್ಪ ಮೊಯ್ಲಿ ತಿಳಿಸಿದರು.
ಶುಕ್ರವಾರ ನಗರದ ಕುಮಾರಕೃಪಾ ಅತಿಥಿಗೃಹದಲ್ಲಿ ನಡೆದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಕರಡು ಸಿದ್ಧತಾ ಸಮಿತಿಯ ಅಂತಿಮ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಇಂದು ಮೂರನೆ ಹಾಗೂ ಅಂತಿಮ ಸಭೆಯನ್ನು ನಡೆಸಿದ್ದೇವೆ. ಈ ಹಿಂದಿನ ಎರಡು ಸಭೆಗಳು ಹಾಗೂ ಇಂದಿನ ಸಭೆಯಲ್ಲಿ ಚರ್ಚಿಸಿದ ಎಲ್ಲ ವಿಷಯಗಳ ಕುರಿತು ಕರಡು ಪ್ರತಿಯನ್ನು ಸಿದ್ಧಪಡಿಸಿ, ಸರಕಾರಕ್ಕೆ ಸಲ್ಲಿಸುತ್ತೇವೆ ಎಂದು ವೀರಪ್ಪ ಮೊಯ್ಲಿ ತಿಳಿಸಿದರು.
ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಜೊತೆ ಇಂದು ಬೆಳಗ್ಗೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಕುರಿತು ನಾವು ಸಮಾಲೋಚನೆ ಮಾಡಿದ್ದೇವೆ. ಸಮ್ಮಿಶ್ರ ಸರಕಾರವು ಐದು ವರ್ಷಗಳಲ್ಲಿ ಸಮತೋಲನ, ಸಮನ್ವತೆಯಿಂದ ಸುಭದ್ರವಾಗಿ ಕೆಲಸ ಮಾಡಲಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ನಡೆದದ್ದೇನು?: ರೈತರ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡಲು ಕಾಂಗ್ರೆಸ್ ಸಮ್ಮತಿಯಿದೆ. ಆದರೆ, ಸಂಪನ್ಮೂಲ ಕ್ರೋಡೀಕರಣ ಹೇಗೆ ಮಾಡುತ್ತೀರಾ ಎಂದು ಸಭೆಯಲ್ಲಿ ಕಾಂಗ್ರೆಸ್ ನಾಯಕರು ಕೇಳಿದ ಪ್ರಶ್ನೆಗೆ ಸಮರ್ಥನೆ ನೀಡಿದ ಜೆಡಿಎಸ್ ನಾಯಕರು, 34 ಸಾವಿರ ಕೋಟಿ ರೂ.ಗಳನ್ನು ನೇರವಾಗಿ ಬ್ಯಾಂಕ್‌ಗಳಿಗೆ ವರ್ಗಾವಣೆ ಮಾಡಿ, ಉಳಿದ ಹಣವನ್ನು ತೆಲಂಗಾಣ ಸರಕಾರದ ಮಾದರಿಯಲ್ಲಿ ಬಾಂಡ್‌ಗೆ ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಕೊಡುತ್ತೇವೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ರೈತರ ಸಾಲ ಮನ್ನಾ ಮಾಡುವ ಜವಾಬ್ದಾರಿಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ನೀಡುವುದು ಹಾಗೂ ಗರ್ಭಿಣಿಯರಿಗೆ ಮಾಸಿಕ 6500 ರೂ. ನೀಡಲು ಜೆಡಿಎಸ್ ಪ್ರಣಾಳಿಕೆಯಲ್ಲಿನ ಭರವಸೆ ಜಾರಿಗೆ ತರಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.
ಹಿಂದಿನ ಸರಕಾರದ ಅವಧಿಯಲ್ಲಿ ಜಾರಿಗೆ ತಂದಿರುವ ಎಲ್ಲ ಪ್ರಮುಖ ಯೋಜನೆಗಳನ್ನು ಮುಂದುವರೆಸುವುದು ಹಾಗೂ ಜಲಸಂಪನ್ಮೂಲ ಇಲಾಖೆಗೆ ಮುಂದಿನ ಐದು ವರ್ಷಗಳಲ್ಲಿ 1.25 ಲಕ್ಷ ಕೋಟಿ ರೂ.ಅನುದಾನ ಒದಗಿಸುವಂತೆ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.
2018ರ ಮೇ 31ರವರೆಗಿನ ರೈತರ ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡುವುದರ ಜೊತೆಗೆ ಸರಕಾರದ ಬೊಕ್ಕಸಕ್ಕೆ ಆಗಬಹುದಾದ ಹೊರೆಯ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಎಲ್ಲ ಇಲಾಖೆಗಳಲ್ಲಿ ಮುಂದಿನ ಐದು ವರ್ಷಗಳಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಪಟ್ಟಿಯನ್ನು ಸಿದ್ಧಪಡಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಕರಡು ವರದಿಯನ್ನು ನಾಳೆ ಸಮನ್ವಯ ಸಮಿತಿಗೆ ಸಲ್ಲಿಸಲು ನಿರ್ಧರಿಸಲಾಗಿದೆ. ಜು.1ರಂದು ನಡೆಯಲಿರುವ ಸಮನ್ವಯ ಸಮಿತಿಯ ಸಭೆಯಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಕರಡು ವರದಿಯ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ಉಭಯ ಪಕ್ಷಗಳ ಮುಖಂಡರು ತೀರ್ಮಾನಿಸಿದ್ದಾರೆ.
ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಸಿದ್ಧತಾ ಸಭೆಯಲ್ಲಿ ಸಚಿವರಾದ ಆರ್.ವಿ.ದೇಶಪಾಂಡೆ, ಎಚ್.ಡಿ.ರೇವಣ್ಣ, ಡಿ.ಕೆ.ಶಿವಕುಮಾರ್ ಹಾಗೂ ಬಂಡೆಪ್ಪ ಕಾಶೆಂಪೂರ್ ಪಾಲ್ಗೊಂಡಿದ್ದರು.







