ಸಿದ್ದರಾಮಯ್ಯ-ದೇವೇಗೌಡರ ನಡುವೆ ವೈಮನಸ್ಸಿಲ್ಲ: ಜಿ.ಟಿ.ದೇವೇಗೌಡ

ಬೆಳಗಾವಿ, ಜೂ.29: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನಡುವೆ ಯಾವುದೇ ವೈಮನಸ್ಸಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಇಬ್ಬರೂ ನಾಯಕರ ನಡುವೆ ದ್ವೇಷ ಅಥವಾ ವೈಮನಸ್ಸು ಇದ್ದಿದ್ದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರ ರಚನೆಯೆ ಆಗುತ್ತಿರಲಿಲ್ಲ ಎಂದರು.
ಬಜೆಟ್ ಮಂಡನೆ ಹಾಗೂ ರೈತರ ಸಾಲ ಮನ್ನಾ ಮಾಡಲು ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಹಿಂದಿನ ಸರಕಾರದಲ್ಲಿ ಅವರು ಘೋಷಿಸಿದ ಕೆಲ ಜನಪ್ರಿಯ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗುವ ಕುರಿತು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ದೇವೇಗೌಡ ತಿಳಿಸಿದರು.
ಸಮ್ಮಿಶ್ರ ಸರಕಾರವನ್ನು ಉಳಿಸಿಕೊಂಡು ಹೋಗುವುದು ಎರಡೂ ಪಕ್ಷಗಳಿಗೆ ಅನಿವಾರ್ಯವಾಗಿದೆ. ಈ ಸರಕಾರ ಉರುಳಿಸಲು ಎರಡೂ ಪಕ್ಷಗಳ ಮುಖಂಡರು ಅವಕಾಶ ನೀಡುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಕ್ತ ಭಾರತ ಮಾಡಬೇಕೆನ್ನುವುದು ಬಿಜೆಪಿಯ ಕನಸು. ಇದಕ್ಕೆ ಅವಕಾಶ ನೀಡಬಾರದು ಎಂಬ ಉದ್ದೇಶದಿಂದಲೆ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಸಮ್ಮಿಶ್ರ ಸರಕಾರದ ನೇತೃತ್ವವಹಿಸಿಕೊಳ್ಳಲು ಜೆಡಿಎಸ್‌ಗೆ ಅವಕಾಶ ನೀಡಿದೆ ಎಂದು ದೇವೇಗೌಡ ಹೇಳಿದರು.
ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದಲೆ ಜೆಡಿಎಸ್ ವರಿಷ್ಠ ದೇವೇಗೌಡರು ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಅವರು ಪುನರುಚ್ಚರಿಸಿದರು.







