ಅತ್ಯಾಚಾರಕ್ಕೊಳಗಾದ ಬಾಲಕಿಯ ಭೇಟಿಯಾದ ಬಿಜೆಪಿ ಶಾಸಕ: ಧನ್ಯವಾದ ಹೇಳುವಂತೆ ಹೆತ್ತವರಿಗೆ ಸೂಚನೆ!

ಮಂಡ್ಸವುರ್ (ಮ.ಪ್ರ), ಜೂ.29: ಸಾಮೂಹಿಕ ಅತ್ಯಾಚಾರಕ್ಕೊಳಪಟ್ಟ ಏಳರ ಹರೆಯದ ಬಾಲಕಿಯ ಹೆತ್ತವರನ್ನು ಶುಕ್ರವಾರದಂದು ಮಂಡ್ಸವುರ್-ನೀಮುಚ್‌ನ ಬಿಜೆಪಿ ಶಾಸಕ ಸುಧೀರ್ ಗುಪ್ತಾ ಹಾಗೂ ಇಂದೋರ್‌ನ ಶಾಸಕ ಹಾಗೂ ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾಗಿರುವ ಸುದರ್ಶನ್ ಗುಪ್ತಾ ಭೇಟಿಯಾಗಿ ಸಾಧ್ಯವಿರುವ ನೆರವನ್ನು ನೀಡುವ ಭರವಸೆ ನೀಡಿದರು. ಆದರೆ ಜೊತೆಗೆ ತಾವು ಆಸ್ಪತ್ರೆಗೆ ಭೇಟಿ ನೀಡಿರುವ ಕಾರಣಕ್ಕೆ ಸಂತ್ರಸ್ತೆಯ ಹೆತ್ತವರು ಧನ್ಯವಾದ ಸೂಚಿಸಬೇಕೆಂದು ತಾಕೀತು ಮಾಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಈ ಬಗ್ಗೆ ಆಂಗ್ಲ ಸುದ್ದಿ ವಾಹಿನಿಗೆ ಸಿಕ್ಕಿರುವ ವಿಡಿಯೊದಲ್ಲಿ, ಮಂಡ್ಸವುರ್ ಶಾಸಕ ಆಸ್ಪತ್ರೆಗೆ ಭೇಟಿ ನೀಡಿರುವುದಕ್ಕೆ ಅವರಿಗೆ ಧನ್ಯವಾದ ಸೂಚಿಸುವಂತೆ ಸಂತ್ರಸ್ತೆಯ ಹೆತ್ತವರಿಗೆ ಇಂದೋರ್ ಬಿಜೆಪಿ ಶಾಸಕ ಸುದರ್ಶನ್ ಗುಪ್ತಾ ತಾಕೀತು ಮಾಡುತ್ತಿರುವುದು ದಾಖಲಾಗಿದೆ. ಸಂತ್ರಸ್ತೆಯ ಹೆತ್ತವರು, ಗುಪ್ತಾ ತಿಳಿಸಿದಂತೆ ಮಾಡಿರುವುದೂ ವಿಡಿಯೊದಲ್ಲಿ ದಾಖಲಾಗಿದೆ. ವಿಷಯ ಬಹಿರಂಗವಾಗುತ್ತಿದ್ದಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ. ಬಿಜೆಪಿ ಶಾಸಕರು ಸಂತ್ರಸ್ತೆಯ ಹೆತ್ತವರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು. ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆಯನ್ನು ನೀಡಲು ವಿಫಲವಾಗಿರುವುದಕ್ಕೆ ಅವರಿಗೆ ನಾಚಿಕೆಯಾಗಬೇಕು ಎಂದು ಕಾಂಗ್ರೆಸ್‌ನ ಮಯಾಂಕ್ ಅಗರ್ವಾಲ್ ತಿಳಿಸಿದ್ದಾರೆ.
ಬಿಜೆಪಿ ಕೂಡಾ ಇಂಥ ಯಾವುದೇ ಮಾತುಗಳನ್ನು ಆಡುವುದನ್ನು ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿರುವವರು ನಿಲ್ಲಿಸಬೇಕು ಎಂದು ಸಲಹೆ ನೀಡಿದೆ. ಪೊಲೀಸರ ಪ್ರಕಾರ, ಬಾಲಕಿಯ ಕುತ್ತಿಗೆಯನ್ನು ಸೀಳಲಾಗಿದೆ. ಆಕೆಯ ಮುಖದಲ್ಲಿ ಆಳವಾದ ತಿವಿದ ಗಾಯಗಳಿದ್ದು ದೇಹದೆಲ್ಲೆಡೆ ಗಾಯಗಳಿವೆ. ಇನ್ನೂ ಆಘಾತದಿಂದ ಹೊರಬರದ ಆಕೆ ಮಾತನಾಡಲೂ ಕಷ್ಟಪಡುತ್ತಿದ್ದಾಳೆ. ಘಟನೆಯ ಬಗ್ಗೆ ಸನ್ನೆಯ ಮೂಲಕವೇ ತನ್ನ ತಾಯಿಗೆ ತಿಳಿಸಿರುವ ಆಕೆ, ಇಬ್ಬರು ಅಂಕಲ್‌ಗಳ ಬಗ್ಗೆ ತಿಳಿಸಿದ್ದಾಳೆ. ಆರೋಪಿಗಳಲ್ಲಿ ಒಬ್ಬನನ್ನು ಇರ್ಫಾನ್ ಖಾನ್ ಎಂದು ಗುರುತಿಸಲಾಗಿದ್ದು ಆತನನ್ನು ಬುಧವಾರ ಬಂಧಿಸಲಾಗಿತ್ತು. ಆತ ನೀಡಿದ ಮಾಹಿತಿಯ ಆಧಾರದಲ್ಲಿ ಶುಕ್ರವಾರದಂದು ಆತನ ಗೆಳೆಯ ಆಸಿಫ್‌ನನ್ನು ಬಂಧಿಸಲಾಗಿದೆ. ಈತ ಕಟ್ಟಡ ಕಾರ್ಮಿಕನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಬಾಲಕಿಯು ಮಂಗಳವಾರದಿಂದ ನಾಪತ್ತೆಯಾಗಿದ್ದಳು. ಮರುದಿನ ಹುಡುಕಾಡಿದಾಗ ಆಕೆ ಶಾಲೆ ಸಮೀಪದ ಅರಣ್ಯ ಪ್ರದೇಶದಲ್ಲಿ ಪ್ರಜ್ಞಾಹೀನಳಾಗಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆಕೆಯ ಶಾಲಾ ಬ್ಯಾಗ್, ನೀರಿನ ಬಾಟಲಿ ಹಾಗೂ ಊಟದ ಡಬ್ಬಿ ಹತ್ತಿರದಲ್ಲೇ ಬಿದ್ದಿದ್ದು ಜೊತೆಗೆ ಖಾಲಿ ಬಿಯರ್ ಬಾಟಲಿ ಕೂಡಾ ಪತ್ತೆಯಾಗಿತ್ತು.







