ಮಹಾರಾಣಿ ಕಾಲೇಜಿಗೆ ಶಾಸಕ ಎಲ್.ನಾಗೇಂದ್ರ ಭೇಟಿ

ಮೈಸೂರು,ಜೂ.29: ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜು ಮತ್ತು ಆರ್ಟ್ಸ್ ಕಾಲೇಜಿಗೆ ಸಂಬಂಧಿಸಿದಂತೆ ಕೆಲವು ದೂರುಗಳು ವಿದ್ಯಾರ್ಥಿನಿಯರಿಂದ ಬಂದ ಹಿನ್ನೆಲೆಯಲ್ಲಿ ಚಾಮರಾಜ ಕ್ಷೇತ್ರದ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಲ್ ನಾಗೇಂದ್ರ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ಕಾಲೇಜಿನ ಹಾಗೂ ವಿದ್ಯಾರ್ಥಿ ನಿಲಯದ ಶೌಚಾಲಯಗಳಲ್ಲಿ ಶುಚಿತ್ವ ಇಲ್ಲದ್ದನ್ನು ಕಂಡು ಈ ಕೂಡಲೇ ವೈಟ್ ವಾಶ್ ಮಾಡಿಸಬೇಕೆಂದು ಸಂಬಂಧಪಟ್ಟವರಿಗೆ ಆದೇಶಿಸಿದರು .ನಂತರ ಕಾಲೇಜಿನ ಕೆಲವು ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳುವಂತೆ ಜಂಟಿ ನಿರ್ದೇಶಕರಿಗೆ ಹಾಗೂ ಪ್ರಾಂಶುಪಾಲರು ಅಧ್ಯಾಪಕರಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಅಧ್ಯಾಪಕರುಗಳು ಕೆಲವು ಅವಶ್ಯಕತೆಗಳನ್ನು ಪೂರೈಸಿ ಕೊಡಲು ಶಾಸಕರಿಗೆ ಮನವಿಯನ್ನು ಅರ್ಪಿಸಿದರು .ನೀರಿನ ವ್ಯವಸ್ಥೆಗಾಗಿ ಬೋರ್ವೆಲ್ ಇದ್ದು ನೀರೆತ್ತಲು ಹೆಚ್ಚು ಅಶ್ವಶಕ್ತಿಯ ಪಂಪ್ ಅಳವಡಿಸಬೇಕು . ಕಾವೇರಿ ನೀರಿನ ಪೈಪ್ ಲೈನ್ ಇರುವುದಿಲ್ಲ ಹೊಸದಾಗಿ ಪೈಪ್ಲೈನ್ ಅಳವಡಿಸಬೇಕು . ಸುಮಾರು ಇಪ್ಪತ್ತೈದು ಸಾವಿರ ಲೀಟರ್ ನೀರಿನ ಸಂಪ್ ಮಾಡಿಸಬೇಕು ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕಾಲೇಜಿಗೆ ಸೇರುತ್ತಿರುವುದರಿಂದ ಕೊಠಡಿಯನ್ನು ಹೆಚ್ಚಿಸಬೇಕು .ಪೀಠೋಪಕರಣಗಳು ಬೇಕು. ವಿಜ್ಞಾನದ ಲ್ಯಾಬ್ ಗೆ ಪರಿಕರಗಳ ಅವಶ್ಯಕತೆ ಇದೆ. ಡಿ ದರ್ಜೆಯ ನೌಕರರ ಅವಶ್ಯಕತೆ ಇದೆ ಎಂದು ತಿಳಿಸಿದರು. ಅದಕ್ಕೆ ಪೂರಕವಾಗಿ ಸ್ಪಂದಿಸಿದ ಶಾಸಕರು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಹಾಗೂ ಸಂಸದರ ನಿಧಿಯಿಂದ ಮತ್ತು ಸಾರ್ವಜನಿಕರಿಂದ ದೇಣಿಗೆಯನ್ನು ಸಂಗ್ರಹಿಸಿ ಮಕ್ಕಳಿಗೆ ಅನುಕೂಲವನ್ನು ಕಲ್ಪಿಸಿಕೊಡುವ ಭರವಸೆಯನ್ನು ನೀಡಿದರು .







