ಬರೋಬ್ಬರಿ 529 ಬಿಲಿಯನ್ ಡಾಲರ್ ದಾಟಿದ ಭಾರತದ ವಿದೇಶಿ ಸಾಲ
ಶೇ.12ರಷ್ಟು ಏರಿಕೆ

ಮುಂಬೈ,ಜೂ.29: 2018,ಮಾರ್ಚ್ 31ಕ್ಕೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಭಾರತದ ಒಟ್ಟು ವಿದೇಶಿ ಸಾಲದ ಪ್ರಮಾಣವು 529 ಶತಕೋಟಿ ಡಾಲರ್‌ಗಳಿಗೆ ತಲುಪಿದ್ದು, ಶೇ.12.4ರಷ್ಟು ಏರಿಕೆಯನ್ನು ಕಂಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು 471.3 ಶತಕೋಟಿ ಡಾ.ಗಳಷ್ಟಿತ್ತು ಎಂದು ಆರ್‌ಬಿಐ ಶುಕ್ರವಾರ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ವಾಣಿಜ್ಯಿಕ ಸಾಲಗಳು,ಅಲ್ಪಾವಧಿಯ ಸಾಲಗಳು ಮತ್ತು ಎನ್ನಾರೈ ಠೇವಣಿಗಳಲ್ಲಿ ಏರಿಕೆಯಾಗಿರುವುದು ಈ ವರ್ಷದ ಮಾರ್ಚ್ ಅಂತ್ಯಕ್ಕೆ ವಿದೇಶಿ ಸಾಲಗಳು ಹೆಚ್ಚಲು ಪ್ರಮುಖ ಕಾರಣವಾಗಿದೆ ಎಂದು ತಿಳಿಸಿರುವ ಆರ್‌ಬಿಐ,ಪ್ರಮುಖ ಕರೆನ್ಸಿಗಳ ವಿರುದ್ಧ ಡಾಲರ್‌ನ ಅಪಮೌಲ್ಯದ ಪರಿಣಾಮವಾಗಿ ಉಂಟಾದ ಮೌಲ್ಯಮಾಪನ ನಷ್ಟವೂ ವಿದೇಶಿ ಸಾಲಗಳ ಹೆಚ್ಚಳಕ್ಕೆ ಭಾಗಶಃ ಕಾರಣವಾಗಿದೆ. 2018,ಮಾರ್ಚ್ ಅಂತ್ಯಕ್ಕೆ ಜಿಡಿಪಿಗೆ ವಿದೇಶಿ ಸಾಲದ ಅನುಪಾತವು ಶೇ.20.5ರಷ್ಟಿದ್ದು,ಇದು 2017,ಮಾರ್ಚ್ ಅಂತ್ಯಕ್ಕೆ ಶೇ.20ರಷ್ಟಿತ್ತು ಎಂದು ಹೇಳಿದೆ.
ವೌಲ್ಯಮಾಪನ ನಷ್ಟದ ಪರಿಣಾಮವನ್ನು ಹೊರತುಪಡಿಸಿದರೆ ವಿದೇಶಿ ಸಾಲಗಳಲ್ಲಿ ಹೆಚ್ಚಳವು 58.4 ಶತಕೋಟಿ ಡಾ.ಗಳ ಬದಲು 53.1 ಶತಕೋಟಿ ಡಾ.ಆಗಿರುತ್ತಿತ್ತು ಎಂದು ಅದು ತಿಳಿಸಿದೆ.
ವಿದೇಶಿ ಸಾಲಗಳಲ್ಲಿ ವಾಣಿಜ್ಯಿಕ ಸಾಲಗಳ ಸಿಂಹಪಾಲು(ಶೇ.32.8) ಮುಂದುವರಿದಿದ್ದು,ಎನ್ನಾರೈ ಠೇವಣಿಗಳು ಮತ್ತು ಅಲ್ಪಾವಧಿ ಸಾಲಗಳ ಪಾಲು ಅನುಕ್ರಮವಾಗಿ ಶೇ.23.8 ಮತ್ತು ಶೇ.19ರಷ್ಟಿದೆ ಎಂದೂ ಪ್ರಕಟಣೆಯು ತಿಳಿಸಿದೆ.





