ಸಕಲೇಶಪುರ : ಚಾಕು ತೋರಿಸಿ ವೃದ್ಧೆಯ ಚಿನ್ನಾಭರಣ ದೋಚಿದ ದುಷ್ಕರ್ಮಿಗಳು

ಸಕಲೇಶಪುರ,ಜೂ.29: ವೃದ್ದೆಯೋರ್ವರ ಚಿನ್ನಾಭರಣ ದೋಚಿರುವ ಘಟನೆ ಸಕಲೇಶಪುರ ರೈಲ್ವೆ ವ್ಯಾಪ್ತಿಯಲ್ಲಿ ನಡೆದಿದೆ.
ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ಕಣ್ಣೂರು ಎಕ್ಸ್ ಪ್ರೆಸ್ ರೈಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಶಕುಂತಳಾ (61) ವರ್ಷ ದುಷ್ಕರ್ಮಿಗಳಿಂದ ಚಿನ್ನಾಭರಣ ಕಳೆದುಕೊಂಡಿದ್ದಾರೆ. ಮಂಗಳೂರು ರೈಲ್ವೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಲ್ಲಿನ ಮೈಸೂರು ವಿಭಾಗಕ್ಕೆ ವರ್ಗಾಯಿಸಿದ್ದಾರೆ.
ಘಟನೆಯ ವಿವರ: ಶೇ. 60ರಷ್ಟು ಅಂಗವಿಕಲರಾಗಿರುವ ಶಕುಂತಳರವರು ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ಬಂಟ್ವಾಳಕ್ಕೆ ಹೋಗಲು ಅಂಗವಿಕಲಿರಿಗೆ ಮೀಸಲಾಗಿರಿಸಿದ್ದ ಬೋಗಿಯನ್ನು ಹತ್ತಿದ್ದಾರೆ. ಹಾಸನ ನಿಲ್ದಾಣ ತಲುಪಿದ ನಂತರ ಮೂವರು 30ರ ಅಸುಪಾಸಿನ ಯುವಕರು ಅಂಗವಿಕಲರ ಬೋಗಿ ಸಮೀಪ ಬಂದು ಬಾಗಿಲು ತೆರೆಯುವಂತೆ ಒತ್ತಾಯಿಸಿದ್ದಾರೆ. ಈ ಸಂಧರ್ಭದಲ್ಲಿ ವೃದ್ದೆ ಬಾಗಿಲು ತೆರೆದಿದ್ದು ಮೂವರು ಯುವಕರು ಇದೇ ಬೋಗಿಯನ್ನು ಪ್ರವೇಶಿಸಿದ್ದಾರೆ. ಹಾಸನದ ಕ್ಯಾನ್ಸರ್ ಪೀಡಿತ ವೃದ್ದರೋರ್ವರು ಇದೇ ಬೋಗಿಗೆ ಹತ್ತಿದ್ದು ಒಟ್ಟು ಮೂವರು ಯುವಕರು ಹಾಗೂ ಇನೊಬ್ಬ ವೃದ್ದೆ ಅಂಗವಿಕಲರ ಬೋಗಿಯಲ್ಲಿ ಪ್ರಯಾಣ ಬೆಳೆಸಿದ್ದಾರೆ. ಮಾರ್ಗ ಮಧ್ಯದಲ್ಲಿ ಯುವಕರು ವೃದ್ದೆಯನ್ನು ಮಾತನಾಡಿಸಿ ಅವರ ಹಿನ್ನೆಲೆಯನ್ನು ತಿಳಿದುಕೊಂಡು ಸಕಲೇಶಪುರ ಸಮೀಪ ಬರುವಾಗ ವೃದ್ದೆಯ ಮೊಬೈಲ್‍ನ್ನು ಯುವಕನೊಬ್ಬ ಕದ್ದುಕೊಂಡು ಹೋಗಿದ್ದಾನೆಂದು ಆಕೆಗೆ ಹೇಳಿ ಆಕೆಯ ಗಮನವನ್ನು ಬೇರೆಡೆಗೆ ಸೆಳೆದು ಆಕೆ ಮೊಬೈಲ್‍ನತ್ತ ಗಮನ ಹರಿಸಿದಾಗ ರೈಲು ಬೋಗಿಯ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಚಾಕು ತೋರಿಸಿ ಚಿನ್ನಾಭರಣವನ್ನು ದೋಚಿಕೊಂಡು ಹೋಗಿದ್ದಾರೆ.
ಈ ಸಂಧರ್ಭದಲ್ಲಿ ತಡೆಯಲು ಬಂದ ಇನ್ನೊಬ್ಬ ವೃದ್ದನಿಗೆ ಚಾಕು ತೋರಿಸಿ ಸಕಲೇಶಪುರ ಸಮೀಪ ಮೂವರು ರೈಲಿನಿಂದ ಜಿಗಿದು ಪರಾರಿಯಾಗಿದ್ದಾರೆ. ವೃದ್ದೆಯು ಮೊದಲು ಸಕಲೇಶಪುರ ರೈಲ್ವೆ ಪೋಲಿಸರಿಗೆ ಮಾಹಿತಿ ನೀಡಿ ಮಂಗಳೂರಿನಲ್ಲಿ ದೂರು ದಾಖಲಿಸಿದ್ದಾರೆ. ಸಕಲೇಶಪುರ ರೈಲ್ವೆ ಪೋಲಿಸರು ಪಟ್ಟಣದ ಪೋಲಿಸರಿಗೆ ಮಾಹಿತಿ ನೀಡಿದ್ದು, ಆರೋಪಿಗಳು ಪೋಲಿಸರ ಕೈಗೆ ಸಿಲುಕದೆ ಪರಾರಿಯಾಗಿದ್ದಾರೆ. ವೃದ್ದೆಯ ಸರ, ಓಲೆ, ಬಳೆಗಳನ್ನು ಕಳ್ಳರು ದೋಚಿದ್ದು ನಿಖರವಾದ ಮೊತ್ತ ತಿಳಿದು ಬಂದಿಲ್ಲ. ದೂರದ ರಾಜ್ಯಗಳಲ್ಲಿ ಕೇಳಿ ಬರುತ್ತಿದ್ದ ಇಂತಹ ಪ್ರಕರಣಗಳು ಸಕಲೇಶಪುರದಲ್ಲಿ ನಡೆದಿರುವುದು ಜಿಲ್ಲೆಯ ಜನತೆಯನ್ನು ತಲ್ಲಣಗೊಳಿಸಿದೆ.







