ವ್ಯಕ್ತಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ 8 ತಿಂಗಳ ಸಜೆ
ಮಂಡ್ಯ, ಜೂ.29: ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪಿಗೆ ನಗರದ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಐಪಿಸಿ ಕಲಂ 324ರಡಿಯಲ್ಲಿ 8 ತಿಂಗಳ ಸಾದಾ ಸಜೆ ಹಾಗೂ 4 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದರೆ 1 ತಿಂಗಳ ಸಾದಾ ಸಜೆ ಅನುಭವಿಸಲು ತೀರ್ಪು ನೀಡಿದ್ದಾರೆ.
ತಾಲೂಕಿನ ಹೊಸಬೂದನೂರು ಗ್ರಾಮದ ರಾಮರಾಜ್ ಪುತ್ರ ಮುತ್ತುರಾಜ್ ಶಿಕ್ಷೆಗೊಳಗಾದ ವ್ಯಕ್ತಿಯಾಗಿದ್ದು, ಇವರ ವಿರುದ್ಧ ಕೃಷ್ಣ ಎಂಬುವರು ದೂರು ನೀಡಿದ್ದರು. ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಪ್ರಾಜಿಕ್ಯೂಷನ್ ಪರವಾಗಿ ಸರಕಾರಿ ಅಭಿಯೋಜಕ ಎ.ಪಿ. ಫಿರೋಜ್‍ಖಾನ್ ವಾದ ಮಂಡಿಸಿದ್ದರು.
ಕಳೆದ ವರ್ಷ ಜೂನ್ 20 ರಂದು ಸಂಜೆ ಗ್ರಾಮದ ಛತ್ರಪತಿ ಹೊಟೇಲ್ ಹತ್ತಿರ ತನ್ನ ಸ್ನೇಹಿರಾದ ವಿನೋದ್‍ಕುಮಾರ್, ಪ್ರದೀಪ್ ಜತೆ ಕುಳಿತಿದ್ದಾಗ, ಗ್ರಾಪಂ ಚುನಾವಣೆ ಕಾಲದ ದ್ವೇಷದ ಹಿನ್ನೆಲೆಯಲ್ಲಿ ಮುತ್ತುರಾಜ್ ಬಾಟಲ್‍ನಿಂದ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ್ದ ಎಂದು ಪಿರ್ಯಾದುದಾರ ಕೃಷ್ಣ ಪೊಲೀಸರಿಗೆ ದೂರು ನೀಡಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಧೀಶ ಬಲಿಗುರ್ ರೆಹಮಾನ್ ಅವರು, ಆರೋಪಿಯು ಪಿರ್ಯಾದುದಾರ ಕೃಷ್ಣನನ್ನು ಕೊಲೆಮಾಡಲು ಪ್ರಯತ್ನಿಸಿಲ್ಲ. ಆದರೆ, ಅವನಿಗೆ ಬಾಟಲ್‍ನಿಂದ ಹೊಡೆದು ಸಾಮಾನ್ಯ ಸ್ವರೂಪದ ಗಾಯವನ್ನುಂಟು ಮಾಡಿ ಅಪರಾಧ ಎಸಗಿದ್ದಾನೆ ಎಂದು ತೀರ್ಪಿನಲ್ಲಿ ಹೇಳಿದ್ದಾರೆ.







